IPL 2024: ಲಯ ಕಂಡುಕೊಳ್ಳುವಲ್ಲಿ ಪರದಾಡುತ್ತಿರುವ ದುಬಾರಿ ಆಟಗಾರರು
ಪ್ರಸಕ್ತ ಐಪಿಎಲ್ ರೋಚಕತೆ ಹೆಚ್ಚಿಸಿದೆ. ಈಗಾಗಲೇ ಎಲ್ಲ ತಂಡಗಳು ಗೆಲುವಿನ ಖಾತೆಯನ್ನು ತೆರೆದಿವೆ. ಈಗ ಪ್ಲೇಆಫ್ ಲೆಕ್ಕಾಚಾರ ಆರಂಭವಾಗಿದೆ. ಆರ್‌ಸಿಬಿ ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಡುವ ಅವಶ್ಯಕತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಸಹ ತನ್ನ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಮುಂಬೈ ಸಹ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಈ ಮೂರು ಟೀಮ್‌ಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ತಂಡಗಳು ಕನಿಷ್ಠ ಎರಡು ಜಯ ಸಾಧಿಸಿವೆ.
ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಬೇಕು ಎಂದು ಪ್ಲ್ಯಾನ್ ಹಾಕಿಕೊಂಡಿದ್ದ ಕೆಲವು ಆಟಗಾರರ ಲಕ್ ಹಿಡಿದಿದೆ. ಇನ್ನು ಕೆಲವರ ಆಟಗಾರರು ಇನ್ನು ಲಯ ಕಂಡುಕೊಳ್ಳಲು ಸ್ಟ್ರಗಲ್ ಮಾಡುತ್ತಿದ್ದಾರೆ. ಈ ನಡುವೆ 10 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ತಮ್ಮ ತಂಡಕ್ಕೆ ಸೇರಿಸಿಕೊಂಡ ಸ್ಟಾರ್ ಆಟಗಾರರ ಪ್ರದರ್ಶನ ತಂಡಕ್ಕೆ ನೆರವಾಗುತ್ತಿಲ್ಲ ಎಂಬ ಚಿಂತೆ ಫ್ರಾಂಚೈಸಿಗಳಿಗೆ ಕಾಡುತ್ತಿದೆ. ಮಾಲೀಕರ ಚಿಂತೆಯನ್ನು ದ್ವಿಗುಣ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ.

ಮಿಚೆಲ್ ಸ್ಟಾರ್ಕ್
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನವನ್ನು ಗಮನಿಸಿ ಫ್ರಾಂಚೈಸಿ ಮಿಚೆಲ್ ಸ್ಟಾರ್ಕ್‌ಗೆ ಭಾರಿ ಮೊತ್ತವನ್ನು ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಇವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ಬರೋಬ್ಬರಿ 24.70 ಕೋಟಿ ರೂಗೆ ಕೆಕೆಆರ್ ತಂಡವನ್ನು ಸೇರಿಕೊಂಡರು. ಆದರೆ ಪ್ರಸಕ್ತ ಐಪಿಎಲ್‌ನಲ್ಲಿ ಸ್ಟಾರ್ಕ್ ತಮ್ಮ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.
ಐಪಿಎಲ್ 2024 ರ ಮೊದಲ ಎರಡು ಪಂದ್ಯಗಳಲ್ಲಿ, ಅವರು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಸಾಕಷ್ಟು ರನ್ ನೀಡಿದರು. ಮೊದಲ ಎರಡು ಪಂದ್ಯಗಳಲ್ಲಿ ಅವರು 47 ರನ್ ಮತ್ತು 53 ರನ್ ನೀಡಿದರು. ಇದರ ನಂತರ, ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಪಡೆದರು. ಇನ್ನು ಚೆನ್ನೈ ವಿರುದ್ಧದ ಪಂದ್ಯದಲ್ಲೂ ಸ್ಟಾರ್ಕ್ ಮೂರು ಓವರ್ ಬೌಲ್ ಮಾಡಿ 29 ರನ್ ನೀಡಿ ಕೈ ಸುಟ್ಟುಕೊಂಡರು. ಸ್ಟಾರ್ಕ್ ನಾಲ್ಕು ಪಂದ್ಯಗಳನ್ನು ಆಡಿ ಕೇವಲ 3 ವಿಕೆಟ್ಗಳನ್ನು ಹೊಂದಿದ್ದಾರೆ. ಅವರ ಅಭಿನಯ ತೀರಾ ನೀರಾಶಾದಾಯಕವಾಗಿದೆ.

ಡೇರಿಲ್ ಮಿಚೆಲ್
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್. ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಕೋಟಿ ರೂ ನೀಡಿ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಐಪಿಎಲ್ 2024 ರಲ್ಲಿ ಅವರ ಪ್ರದರ್ಶನದಿಂದ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ವಿರುದ್ಧ 22 ರನ್, ಗುಜರಾತ್ ಟೈಟಾನ್ಸ್ ವಿರುದ್ಧ 24 ರನ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 34 ರನ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 13 ರನ್, ಕೆಕೆಆರ್ ವಿರುದ್ಧ 25 ಗಳಿಸಿದ್ದಾರೆ. ಇನ್ನು ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಇವರು ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಇವರು ಸಹ ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ.

ಹರ್ಷಲ್ ಪಟೇಲ್
ಡೆತ್ ಓವರ್‌ಗಳಲ್ಲಿ ತಮ್ಮ ಸ್ಲೋವರ್ ಒನ್ ಎಸೆತಗಳಿಂದಲೇ ಕಳೆದ ಕೆಲವು ಆವೃತ್ತಿಗಳಲ್ಲಿ ಹೆಸರು ಮಾಡಿದ್ದ ಹರ್ಷಲ್ ಪಟೇಲ್, ಈ ಬಾರಿ ಮಂಕಾಗಿದ್ದಾರೆ. ಇವರನ್ನು ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ 11.75 ಕೋಟಿ ರೂ.ಗೆ ಖರೀದಿಸಿತ್ತು. ಈ ಹಿಂದೆ ಅವರು ಆರ್‌ಸಿಬಿ ತಂಡದ ಭಾಗವಾಗಿದ್ದರು. ಹರ್ಷಲ್ ಪಟೇಲ್ IPL 2024 ರಲ್ಲಿ ತುಂಬಾ ದುಬಾರಿ ಎಂದು ಸಾಬೀತಾಗುತ್ತಿದ್ದಾರೆ. ಹರ್ಷಲ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ನೀಡಿ 2 ವಿಕೆಟ್ ಪಡೆದರೆ, ಆರ್‌ಸಿಬಿ 45 ರನ್ ನೀಡಿ ಒಂದು ವಿಕೆಟ್ ಪಡೆದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 45 ರನ್ ನೀಡಿ, ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 44 ರನ್ ನೀಡಿ ಒಂದು ವಿಕೆಟ್ ಪಡೆದರು. ಇವರ ಈ ಪ್ರದರ್ಶನ ನಿಜಕ್ಕೂ ಪಂಜಾಬ್ ತಂಡದ ಟೆನ್ಷನ್ ಹೆಚ್ಚಿಸಿದೆ.












Click it and Unblock the Notifications