IPL 2023: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆ ಮುರಿಯುತ್ತಾರಾ ಶುಭ್ಮನ್ ಗಿಲ್?
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಫೈನಲ್ ಪಂದ್ಯವು ಭಾನುವಾರ ಮಳೆ ಬಂದು ಅಡ್ಡಿಪಡಿಸಿದ ಕಾರಣ ಮೀಸಲು ದಿನವಾದ ಇಂದು (ಸೋಮವಾರ, ಮೇ 29) ಫೈನಲ್ ಪಂದ್ಯ ನಿಗದಿಯಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿವೆ. ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ.

ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಒಂದೇ ಐಪಿಎಲ್ ಋತುವಿನಲ್ಲಿ 800ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
23ರ ಹರೆಯದ ಶುಭ್ಮನ್ ಗಿಲ್ ತಮ್ಮ ಕೊನೆಯ 4 ಪಂದ್ಯಗಳಲ್ಲಿ 3 ಶತಕಗಳನ್ನು ಬಾರಿಸಿದ್ದಾರೆ ಮತ್ತು ಗುಜರಾತ್ ಟೈಟನ್ಸ್ ತಂಡ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಟೂರ್ನಿಯಲ್ಲಿ ಈವರೆಗೆ 4 ಅರ್ಧ ಗಳಿಸಿದ್ದಾರೆ.
ಶುಭ್ಮನ್ ಗಿಲ್ ಇದೀಗ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಹೊರತುಪಡಿಸಿ ಬೇರೆ ಯಾರೂ ನಿರ್ಮಿಸದ ಪ್ರಮುಖ ದಾಖಲೆಯನ್ನು ನಿರ್ಮಿಸುವ ಅಂಚಿನಲ್ಲಿದ್ದಾರೆ. ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಯುವ ಆರಂಭಿಕ ಶುಭ್ಮನ್ ಗಿಲ್ ಈಗ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ನಂತರದ ಸ್ಥಾನದಲ್ಲಿದ್ದಾರೆ.

ಈ ಋತುವಿನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 60.78 ಸರಾಸರಿ ಮತ್ತು 156.43 ಸ್ಟ್ರೈಕ್‌ರೇಟ್‌ನಲ್ಲಿ 851 ರನ್ ಗಳಿಸಿರುವ ಶುಭ್ಮನ್ ಗಿಲ್, ಪ್ರಸ್ತುತ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಶುಭ್ಮನ್ ಗಿಲ್ ಈವರೆಗೆ 33 ಸಿಕ್ಸರ್‌ಗಳನ್ನು ಬಾರಿಸಿದ್ದರೆ, 78 ಬೌಂಡರಿಗಳನ್ನು ಗಳಿಸಿದ್ದಾರೆ.
ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್ ಅವರ 863 ರನ್‌ಗಳಿಗಿಂತ ಶುಭ್ಮನ್ ಗಿಲ್ ಕೇವಲ 12 ರನ್ ಹಿಂದೆ ಇದ್ದರೆ, ಆರ್‌ಸಿಬಿಯ ವಿರಾಟ್ ಕೊಹ್ಲಿ ಅವರ 973 ರನ್‌ಗಳ ದಾಖಲೆ ಮುರಿಯಲು 122 ರನ್‌ಗಳ ಹಿಂದೆ ಇದ್ದಾರೆ.
ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2016ರಲ್ಲಿ ಒಂದೇ ಐಪಿಎಲ್ ಋತುವಿನಲ್ಲಿ 4 ಶತಕ ಮತ್ತು 7 ಅರ್ಧಶತಕಗಳ ನೆರವಿನಿಂದ 973 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಕಳೆದ ವರ್ಷ ಜೋಸ್ ಬಟ್ಲರ್ 863 ರನ್ ಗಳಿಸಿದ್ದರು ಮತ್ತು ಈ ವೇಳೆ 4 ಶತಕಗಳನ್ನು ಬಾರಿಸಿದ್ದರು.
ವಿರಾಟ್ ಕೊಹ್ಲಿ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಶುಭ್ಮನ್ ಗಿಲ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 122ಕ್ಕೂ ಹೆಚ್ಚು ರನ್ ಗಳಿಸಬೇಕಾಗಿದೆ.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಶುಭ್ಮನ್ ಗಿಲ್ ಅವರಿರುವ ಬ್ಯಾಟಿಂಗ್ ಫಾರ್ಮ್ ಪರಿಗಣಿಸಿ, ಈ ಸಾಧನೆಯನ್ನು ಮಾಡಲು ಅವರು ಸಮರ್ಥರಾಗಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ ದಾಖಲೆ ಮುರಿಯಲು ಶುಭ್ಮನ ಗಿಲ್ ಅವರನ್ನು ಬೆಂಬಲಿಸಿರುವ ಸುನಿಲ್ ಗವಾಸ್ಕರ್, ""ಇದು ಸಾಧ್ಯ ಎಂದು ತೋರುತ್ತದೆ. ಗುಜರಾತ್ ಟೈಟನ್ಸ್ ಮೊದಲು ಬ್ಯಾಟಿಂಗ್ ಮಾಡಿದರೆ, ಶುಭ್ಮನ್ ಗಿಲ್‌ಗೆ ದೊಡ್ಡ ಚಾನ್ಸ್ ಸಿಗಲಿದೆ. ಸಿಎಸ್‌ಕೆ ಮೊದಲು ಬ್ಯಾಟಿಂಗ್ ಮಾಡಿ, 180 ರನ್‌ಗಳಿಗೆ ಕಟ್ಟಿಹಾಕಿದರೆ, ಶುಭ್ಮನ್ ಗಿಲ್ 122 ರನ್ ಗಳಿಸುವುದು ಅಸಾಧ್ಯ,'' ಎಂದು ಹೇಳಿದ್ದಾರೆ.












Click it and Unblock the Notifications