IPL 2023: ಡೆಲ್ಲಿ ಕ್ಯಾಪಿಟಲ್ಸ್ ಯುವ ಆಟಗಾರನ ಬಗ್ಗೆ ರೋಹಿತ್ ಶರ್ಮಾ ಬಳಿ ಗಂಗೂಲಿ ವಿಶೇಷ ಮನವಿ!

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಅಬ್ಬರಿಸಲು ಎಲ್ಲಾ ತಂಡಗಳು ಕೂಡ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆಟಗಾರರು ಕೂಡ ಒಂದೆಡೆ ತಮ್ಮ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಜೊತೆಗೆ ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡುವ ತಮ್ಮದೇ ಆದ ಲೆಕ್ಕಾಚಾರಗಳೊಂದಿಗೆ ಟೂರ್ನಿಗೆ ಸಜ್ಜಾಗುತ್ತಿದ್ದಾರೆ.
ಕೆಲ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದ ಕದ ತಟ್ಟುವ ವಿಶ್ವಾಸದಲ್ಲಿದ್ದರೆ ಇನ್ನೂ ಕೆಲವರು ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾವನ್ನು ಗಟ್ಟಿಗೊಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಿದ್ದಾರೆ. ಇನ್ನೂ ಕೆಲವರಿಗೆ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಕೂಡ ಈ ಐಪಿಎಲ್ ಟೂರ್ನಿ ಅವಕಾಶವನ್ನು ತೆರೆಯುವ ಸಾಧ್ಯತೆ ಕೂಡ ಇದೆ. ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಐಪಿಎಲ್ ಹೊಸ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ.
ಐಪಿಎಲ್ 2023: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಅವರಿಬ್ಬರೇ ಬಲ ಎಂದ ಆಸಿಸ್ ಮಾಜಿ ನಾಯಕ
ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಈ ಬಾರಿ ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿರುವ ಕಾರಣ ಐಪಿಎಲ್ ಟೂರ್ನಿಯಲ್ಲಿನ ಆಟಗಾರರ ಪ್ರದರ್ಶನ ಮಹತ್ವ ಪಡೆಯಲಿರುವ ಹಿನ್ನೆಲೆಯಲ್ಲಿ ಸೌರವ್ ಗಂಗುಲಿ ಈ ಮನವಿ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರ ಪೃಥ್ವಿ ಶಾ ವಿಚಾರವಾಗಿ ಸೌರವ್ ಗಂಗೂಲಿ ವಿಶೇಷ ಭರವಸೆ ವ್ಯಕ್ತಪಡಿಸಿದ್ದು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದಕ್ಕೆ ಬೆಂಬಲಸಿದ್ದಾರೆ. ಟೀಮ್ ಇಂಡಿಯಾ ಆಯ್ಕೆ ಸಮಿತಿ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪೃಥ್ವಿ ಶಾ ಅವರ ಪ್ರದರ್ಶನದ ಮೇಲೆ ಕಣ್ಣಿಡುವಂತೆ ಮನವಿ ಮಾಡಿದ್ದಾರೆ.
"ನನ್ನ ಪ್ರಕಾರ ಪೃಥ್ವಿ ಶಾ ಭಾರತ ತಂಡದ ಪರವಾಗಿ ಆಡಲು ಸಿದ್ಧವಾಗಿದ್ದಾರೆ. ಅವರಿಗೆ ಅವಕಾಶ ದೊರೆಯುವುದು ಸ್ಥಾನದ ಲಭ್ಯತೆಯನ್ನು ಅವಲಂಬಿಸಿದೆ. ರೋಹಿತ್ ಶರ್ಮಾ ಹಾಗೂ ಆಯ್ಕೆಗಾರರು ಆತನ ಮೇಲೆ ಕಣ್ಣಿಟ್ಟಿರಲಿದ್ದಾರೆ ಎಂಬ ಭರವಸೆ ನನಗಿದೆ. ಆತನೋರ್ವ ಉತ್ತಮ ಆಟಗಾರನಾಗಿದ್ದು ಈಗ ಸಿದ್ಧವಾಗಿದ್ದಾರೆ" ಎಂದಿದ್ದಾರೆ ಸೌರವ್ ಗಂಗೂಲಿ.
Afg Vs Pak T20: ಕೊನೆ ಪಂದ್ಯ ಗೆದ್ದ ಪಾಕಿಸ್ತಾನ : ಸರಣಿ ಗೆದ್ದು ಸಂಭ್ರಮಿಸಿದ ಅಫ್ಘಾನಿಸ್ತಾನ
2021ರಲ್ಲಿ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಿದ್ದ ಬಳಿಕ ಪೃಥ್ವಿ ಶಾ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದರು. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸುತ್ತಿರುವ ಪೃಥ್ವಿ ಶಾ ಕಳೆದ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು ಕೂಡ ಆಡುವ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ.
ಪೃಥ್ವಿ ಶಾ ಮೂರು ಮಾದರಿಯಲ್ಲಿಯೂ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದು ಐದು ಟೆಸ್ಟ್, ಆರು ಏಕದಿನ ಹಾಗೂ ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 339 ರನ್‌ಗಳಿಸಿದ್ದರೆ ಏಕದಿನದಲ್ಲಿ 189 ರನ್ ಹಾಗೂ ಆಡುವ ಏಕೈಕ ಟಿ20 ಪಂದ್ಯದಲ್ಲಿ ರನ್ ಗಳಿಸದೆ ಔಟಾಗಿದ್ದರು.












Click it and Unblock the Notifications