IPL 2023: ಈತ ರಶೀದ್ ಖಾನ್‌ನಂತೆ ಪ್ರತಿಭಾವಂತ ಬೌಲರ್ ಎಂದ ಮಾಜಿ ಪಾಕ್ ಕ್ರಿಕೆಟಿಗ
ಐಪಿಎಲ್ 2023ರಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ 23 ರನ್‌ಗಳಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುವ ಗಮನ ಸೆಳೆದದ್ದು ಹೈದರಾಬಾದ್ ತಂಡದ ಮಯಾಂಕ್ ಮಾರ್ಕಂಡೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಮಯಾಂಕ್ ಮಾರ್ಕಂಡೆ ಬೌಲಿಂಗ್ ಅನ್ನು ಮೆಚ್ಚಿಕೊಂಡಿದ್ದು, ರಶೀದ್ ಖಾನ್‌ಗೆ ಹೋಲಿಕೆ ಮಾಡಿದ್ದಾರೆ.
ಈಡನ್ ಗಾರ್ಡನ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 4 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿತು. ಹ್ಯಾರಿ ಬ್ರೂಕ್ ಶತಕ ಗಳಿಸಿದರೆ, ನಾಯಕ ಐಡೆನ್ ಮಾರ್ಕ್ರಾಮ್ ಅರ್ಧಶತಕ ಗಳಿಸಿದರು. ನಂತರ ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 96 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡರು, ನಂತರ ನಾಯಕ ನಿತೀಶ್ ರಾಣ 75 ರನ್ ಮತ್ತು ರಿಂಕು ಸಿಂಗ್ ಅಜೇಯ 58 ರನ್ ಗಳಿಸುವ ಮೂಲಕ ಗೆಲುವಿನ ಸನಿಹ ಬಂದರೂ ಅಂತಿಮವಾಗಿ ಸೋಲೊಪ್ಪಿಕೊಂಡರು.

36 ರನ್ ಗಳಿಸಿದ್ದ ನಾರಾಯಣ್ ಜಗದೀಸನ್ ಮತ್ತು ಅಪಾಯಕಾರಿ ಬ್ಯಾಟರ್ ಆಂಡ್ರೆ ರಸೆಲ್ ಅವರ ವಿಕೆಟ್ ಪಡೆಯುವ ಮೂಲಕ ಮಯಾಂಕ್ ಮಾರ್ಕಂಡೆ ಕೆಕೆಆರ್ ತಂಡಕ್ಕೆ ಆಘಾತ ನೀಡಿದರು. ರನ್‌ಗಳ ಹೊಳೆಯೇ ಹರಿದ ತಂಡದಲ್ಲಿ ಮಯಾಂಕ್ ಮಾರ್ಕಂಡೆ 4 ಓವರ್ ಗಳಲ್ಲಿ 6.75 ಎಕಾನಮಿ ದರದಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ಅವರ ಬೌಲಿಂಗ್ ಈಗ ಸಾಕಷ್ಟು ಗಮನ ಸೆಳೆದಿದೆ.

ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಮೆಚ್ಚುಗೆ
ಮಯಾಂಕ್ ಮಾರ್ಕಂಡೆ ಬೌಲಿಂಗ್ ನೋಡಿ ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಶೀದ್ ಲತೀಫ್ ಕೂಡ ಖಷಿಯಾಗಿದ್ದಾರೆ. ಗಾಳಿಯಲ್ಲಿ ಚೆಂಡನ್ನು ವೇಗವಾಗಿ ಬೌಲ್ ಮಾಡುವುದನ್ನು ನೋಡಿ ಅವರು ಅಚ್ಚರಿಯಾಗಿದ್ದಾರೆ. ಮಯಾಂಕ್ ಮಾರ್ಕಂಡೆಯನ್ನು ರಶೀದ್ ಖಾನ್ ಅವರ ಜೊತೆ ಹೋಲಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಬೌಲರ್ ಆಗಿದ್ದಾರೆ.
"ಮಯಾಂಕ್ ಮಾರ್ಕಂಡೆ ಈ ಹೆಸರನ್ನು ನೆನಪಿಟ್ಟುಕೊಳ್ಳು, ಆತ ವೇಗವನ್ನು ಹೊಂದಿದ್ದಾನೆ, ಗಾಳಿಯ ಮೂಲಕ ಚೆಂಡನ್ನು ವೇಗವಾಗಿ ಬೌಲ್ ಮಾಡುತ್ತಾನೆ. ರವಿ ಬಿಷ್ಣೋಯ್ ಕೂಡ ಉತ್ತಮ ಬೌಲರ್, ಆದರೆ ಗಾಳಿಯಲ್ಲಿ ಚೆಂಡನ್ನು ತಿರುಗಿಸುವಲ್ಲಿ ಯಶಸ್ವಿಯಾಗಿಲ್ಲ. ಮಾರ್ಕಂಡೆ ವಿಭಿನ್ನ ಕೋನ ಹೊಂದಿರುವ ರಶೀದ್ ಖಾನ್ ಮಾದರಿಯ ಬೌಲರ್. ಬ್ಯಾಟರ್ ಗಳು ಅವರ ಗೂಗ್ಲಿಯನ್ನು ಅರಿಯುವಲ್ಲಿ ವಿಫಲವಾಗಿದ್ದರು. ಭವಿಷ್ಯದಲ್ಲಿ ಆತನ ಆಟವನ್ನು ನೋಡಬಹುದು. ಅವರು ಹೆಚ್ಚು ಕ್ರಿಕೆಟ್ ಆಡುವುದನ್ನು ನಾನು ನೋಡಿಲ್ಲ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆತನ ಆಟ ನೋಡಿದೆ. ಇನ್ನು ಎರಡು ವರ್ಷಗಳಲ್ಲಿ ಆತ ಉತ್ತಮ ಬೌಲರ್ ಆಗಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಮಯಾಂಕ್ ಮಾರ್ಕಂಡೆ ಈ ವರ್ಷ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಎರಡು ಪಂದ್ಯಗಳಲ್ಲಿ ಆಡಿದ್ದಾರೆ. ಎರಡೂ ಪಂದ್ಯಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ 4 ಓವರ್ ಗಳಲ್ಲಿ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದುಕೊಂಡಿದ್ದರು. ಕೆಕೆಆರ್ ವಿರುದ್ಧ 2 ವಿಕೆಟ್ ಪಡೆದುಕೊಂಡು ತಂಡದ ಪ್ರಮುಖ ವಿಕೆಟ್ ಪಡೆಯುವ ಬೌಲರ್ ಆಗಿದ್ದಾರೆ.












Click it and Unblock the Notifications