MI vs PBKS: ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ತಂಡ ಯಾವುದು?

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ( ಮೇ 3 ) ಎರಡು ಪಂದ್ಯಗಳು ಜರುಗುತ್ತಿವೆ. ಮಧ್ಯಾಹ್ನದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಇತ್ತಂಡಗಳ ನಡುವಿನ ಈ ಪಂದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 46 ನೇ ಪಂದ್ಯವಾಗಿದ್ದು, ಈ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ಪಂಜಾಬ್ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, 8 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಂಡಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಇತ್ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಮುಖಾಮುಖಿಯಾಗಲಿರುವ ಎರಡನೇ ಪಂದ್ಯ ಇದಾಗಿದ್ದು, ಈ ಪಂದ್ಯವೂ ಸೇರಿದಂತೆ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಒಟ್ಟು 30 ಪಂದ್ಯಗಳು ಜರುಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ ತಂಡ 15 ಪಂದ್ಯಗಳಲ್ಲಿ ಗೆದ್ದಿದ್ದು, ಪಂಜಾಬ್ ಕಿಂಗ್ಸ್ ತಂಡ ಸಹ 15 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ಮುಖಾಮುಖಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ.
ಇತ್ತಂಡಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 31ನೇ ಪಂದ್ಯದಲ್ಲಿ ಏಪ್ರಿಲ್ 24ರಂದು ಮುಖಾಮುಖಿಯಾಗಿದ್ದವು. ಈ ಪಂದ್ದದಲ್ಲಿ ಪಂಜಾಬ್ ಕಿಂಗ್ಸ್ 13 ರನ್‌ಗಳ ಗೆಲುವನ್ನು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತ್ತು. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತ್ತು. ಹೀಗೆ ವಾಂಖೆಡೆಯಲ್ಲಿ ಸೋಲುಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಸೇಡು ತೀರಿಸಿಕೊಳ್ಳುವ ಗುರಿಯನ್ನೊಂದಿದೆ.
ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕೇವಲ ಒಂದೇ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 12 ರನ್‌ಗಳ ಅಂತರದಿಂದ ಗೆಲುವನ್ನು ಕಂಡಿತ್ತು.
2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಇತ್ತಂಡಗಳು ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಈ ಪೈಕಿ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 9 ವಿಕೆಟ್‌ಗಳ ಅಂತರದಿಂದ ಗೆಲುವನ್ನು ಕಂಡಿತ್ತು. ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳ ಅಂತರದ ಜಯ ಕಂಡಿತ್ತು.
ಇತ್ತಂಡಗಳು ಮುಖಾಮುಖಿಯಾದಾಗ ಮುಂಬೈ ಇಂಡಿಯನ್ಸ್ ಗಳಿಸಿದ ಗರಿಷ್ಠ ರನ್ ಎಂದರೆ 230 ಹಾಗೂ ಪಂಜಾಬ್ ಕಿಂಗ್ಸ್ ಗಳಿಸಿದ ಗರಿಷ್ಠ ರನ್ 223. ಇನ್ನು ಕಡಿಮೆ ರನ್ ಮೊತ್ತ ಗಳಿಸಿದ ವಿಚಾರಕ್ಕೆ ಬಂದರೆ ಪಂಜಾಬ್ ಕಿಂಗ್ಸ್ ಗಳಿಸಿರುವ ಕಡಿಮೆ ರನ್ ಎಂದರೆ 87 ಹಾಗೂ ಮುಂಬೈ ಇಂಡಿಯನ್ಸ್ ಗಳಿಸಿರುವ ಗರಿಷ್ಠ ರನ್ ಎಂದರೆ 119 ಆಗಿದೆ.












Click it and Unblock the Notifications