MI vs PBKS: ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ ಅಬ್ಬರ; ಮುಂಬೈಗೆ ಕಠಿಣ ಗುರಿ!

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ( ಮೇ 3 ) ಎರಡು ಪಂದ್ಯಗಳು ಜರುಗುತ್ತಿವೆ. ಮಧ್ಯಾಹ್ನ ನಡೆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡುತ್ತಿವೆ.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡಿದ್ದು ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಲಿಯಾಮ್ ಲಿವಿಂಗ್‌ಸ್ಟನ್ ಹಾಗೂ ಜಿತೇಶ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಪಂಜಾಬ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಕಣಕ್ಕಿಳಿದರು. ಪ್ರಭ್‌ಸಿಮ್ರಾನ್ ಸಿಂಗ್ 9 ರನ್ ಗಳಿಸಿ ಔಟ್ ಆದರೆ, ಶಿಖರ್ ಧವನ್ 20 ಎಸೆತಗಳಲ್ಲಿ 30 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಶಾರ್ಟ್ 26 ಎಸೆತಗಳಲ್ಲಿ 27 ರನ್ ಗಳಿಸಿದರು.
ಮೂರು ವಿಕೆಟ್‌ಗಳ ಬಳಿಕ ಒಂದಾದ ಲಿಯಾಮ್ ಲಿವಿಂಗ್‌ಸ್ಟನ್ ಹಾಗೂ ಜಿತೇಶ್ ಶರ್ಮಾ ಜೋಡಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ಕಂಟಕವಾದರು. 119 ರನ್‌ಗಳ ಜತೆಯಾಟವಾಡಿದ ಈ ಜೋಡಿ ವಿಕೆಟ್ ಕಳೆದುಕೊಳ್ಳದೇ ಅಬ್ಬರದ ಆಟವನ್ನಾಡಿತು.
ಲಿಯಾಮ್ ಲಿವಿಂಗ್‌ಸ್ಟನ್ 42 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದರೆ, ಜಿತೇಶ್ ಶರ್ಮಾ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 49 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪಿಯೂಷ್ ಚಾವ್ಲಾ 2 ವಿಕೆಟ್ ಪಡೆದರೆ, ಅರ್ಷದ್ ಖಾನ್ ಒಂದು ವಿಕೆಟ್ ಪಡೆದರು. ಆದರೆ ಚಾವ್ಲಾ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳೂ ಸಹ ದುಬಾರಿಯಾದರು. ಅದರಲ್ಲಿಯೂ ಜೋಫ್ರಾ ಆರ್ಚರ್ 4 ಓವರ್ ಮಾಡಿ 56 ರನ್ ನೀಡಿ ಕಳಪೆಯಾದರು.
ಆಡುವ ಬಳಗಗಳು:
ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರೆ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಅರ್ಷದ್ ಖಾನ್
ಪಂಜಾಬ್ ಕಿಂಗ್ಸ್ ಆಡುವ ಬಳಗ: ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸ್ಯಾಮ್ ಕುರಾನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್












Click it and Unblock the Notifications