IPL 2023 Final CSK vs GT: ಕೊಹ್ಲಿ ದಾಖಲೆ ಮುರಿಯದಿದ್ದರೂ ಮತ್ತೊಂದು ದಾಖಲೆ ಬರೆದ ಶುಭಮನ್ ಗಿಲ್
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ. 2023ರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದರೂ, 2016ರಲ್ಲಿ ವಿರಾಟ್ ಕೊಹ್ಲಿ ಮಾಡಿದ್ದ ದಾಖಲೆ ಮುರಿಯುವಲ್ಲ ವಿಫಲವಾದರು.
2023ರ ಐಪಿಎಲ್ ಆವೃತ್ತಿಯಲ್ಲಿ 17 ಪಂದ್ಯಗಳನ್ನಾಡಿರುವ ಶುಭಮನ್ ಗಿಲ್ 59.33 ಸರಾಸರಿ ಮತ್ತು 157.80 ಸ್ಟ್ರೈಕ್‌ರೇಟ್‌ನಲ್ಲಿ 890 ರನ್ ಗಳಿಸಿದ್ದಾರೆ. ಇವರನ್ನು ಹೊರತು ಪಡಿಸಿ ಆರ್ ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ 14 ಪಂದ್ಯಗಳಿಂದ 730 ರನ್ ಗಳಿಸಿದ್ದು 2ನೇ ಸ್ಥಾನದಲ್ಲಿದ್ದಾರೆ.

ಶುಭಮನ್ ಗಿಲ್ 890 ರನ್ ಗಳಿಸಿದರೂ ವಿರಾಟ್ ಕೊಹ್ಲಿ ದಾಖಲೆ ಮುರಿಯುವಲ್ಲಿ ವಿಫಲವಾಗಿದ್ದಾರೆ. 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳಿಂದ 81.08 ಸರಾಸರಿ ಮತ್ತು 152.03 ಸ್ಟ್ರೈಕ್ ರೇಟ್‌ನಲ್ಲಿ 973 ರನ್ ಗಳಿಸಿದ್ದರು, ಇದರಲ್ಲಿ 4 ಶತಕಗಳು ಸೇರಿದ್ದವು, ಇದು ಈವರೆಗೂ ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದು ಆವೃತ್ತಿಯಲ್ಲಿ ಗಳಿಸಿದ ಅತ್ಯಧಿಕ ಮೊತ್ತ ಎನಿಸಿಕೊಂಡಿದೆ.
ಕೊಹ್ಲಿ ಹೊರತು ಪಡಿಸಿ ಉಳಿದ ಯಾವ ಆಟಗಾರರು ಕೂಡ 900 ರನ್‌ಗಳ ಗಡಿಯನ್ನು ದಾಟಿಲ್ಲ. ಈ ಬಾರಿ ಶುಭಮನ್ ಗಿಲ್ 890 ರನ್ ಗಳಿಸಿರುವುದು ಎರಡನೇ ಅತ್ಯಧಿಕ ರನ್‌ಗಳಾಗಿದೆ. ಅವರು ಈ ಬಾರಿ ಐಪಿಎಲ್‌ನಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ.
ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್
ಈ ಬಾರಿ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಬ್ಯಾಟರ್ ಆಗಿರುವ ಗಿಲ್ ಹಲವು ಪಂದ್ಯಗಳಲ್ಲಿ ಗೆಲುವಿಗೆ ಪ್ರಮುಖ ಕಾರಣವಾಗಿದ್ದಾರೆ. ಅದರಲ್ಲೂ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಶತಕ ಗಳಿಸಿದ ಅವರು ಗುಜರಾತ್ ಫೈನಲ್ ತಲುಪುವಲ್ಲಿ ಪ್ರಮುಖ ಕಾರಣ ಎನಿಸಿಕೊಂಡರು.
ಈ ಬಾರಿ ಕೊಹ್ಲಿಯ ಹಲವು ದಾಖಲೆಗಳನ್ನು ಮುರಿಯುವ ಅವಕಾಶ ಇತ್ತಾದರೂ, ಸಿಎಸ್‌ಕೆ ವಿರುದ್ಧದ ಫೈನಲ್ ಪಂದ್ಯದಲ್ಲಿ 20 ಎಸೆತಗಳಲ್ಲಿ 39 ರನ್‌ಗಳಿಸಿ ಎಂಎಸ್ ಧೋನಿ ಅವರ ಮಿಂಚಿನ ಸ್ಟಂಪ್‌ಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.
ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ಭಾರತ ತಂಡಕ್ಕೂ ಶುಭ ಸುದ್ದಿಯಾಗಿದೆ. ಜೂನ್ 6ರಿಂದ 11ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದ್ದು, ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications