DC vs SRH: ರನ್ ಗಳಿಸಲು ತಿಣುಕಾಡಿದ ಡೆಲ್ಲಿ ಕ್ಯಾಪಿಟಲ್ಸ್; ಹೈದರಾಬಾದ್‌ಗೆ ಸಾಧಾರಣ ಗುರಿ

ಇಂದು ( ಏಪ್ರಿಲ್ 24 ) ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 34ನೇ ಪಂದ್ಯ ಜರುಗುತ್ತಿದ್ದು, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಎದುರು ಭರ್ಜರಿ ರನ್ ಗಳಿಸಲು ತಿಣುಕಾಡಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರರಾಗಿ ಡೇವಿಡ್ ವಾರ್ನರ್ ಹಾಗೂ ಫಿಲಿಪ್ ಸಾಲ್ಟ್ ಕಣಕ್ಕಿಳಿದರು. ಈ ಪೈಕಿ ಫಿಲಿಪ್ ಸಾಲ್ಟ್ ಗೋಲ್ಡನ್ ಡಕ್ ಔಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಘಾತ ಅನುಭವಿಸಿತು.
ಡೇವಿಡ್ ವಾರ್ನರ್ 21 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 25 ರನ್, ಶರ್ಘರಾಜ್ ಖಾನ್ 10 ರನ್, ಮನೀಶ್ ಪಾಂಡೆ 34 ರನ್, ಅಮನ್ ಹಕೀಮ್ ಖಾನ್ 4 ರನ್, ಅಕ್ಷರ್ ಪಟೇಲ್ 34 ರನ್, ಅನ್ರಿಚ್ ನಾರ್ಕಿಯಾ 2 ರನ್, ಕುಲ್‌ದೀಪ್ ಯಾದವ್ ಅಜೇಯ 4 ರನ್ ಹಾಗೂ ಇಶಾಂತ್ ಶರ್ಮಾ ಅಜೇಯ 1 ರನ್ ಕಲೆಹಾಕಿದರು.
ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿದ್ದು, ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 145 ರನ್‌ಗಳ ಗುರಿಯನ್ನು ನೀಡಿದೆ.
ಆಡುವ ಬಳಗಗಳು:
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಾಲ್ ಪಟೇಲ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ
ಸನ್ ರೈಸರ್ಸ್ ಹೈದರಾಬಾದ್ ಆಡುವ ಬಳಗ: ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಐಡೆನ್ ಮಾರ್ಕ್ರಾಮ್(ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
ಇನ್ನು ಎರಡೂ ತಂಡಗಳಿಗೂ ಸಹ ಈ ಪಂದ್ಯ ಟೂರ್ನಿಯಲ್ಲಿ ತಾವು ಆಡಲಿರುವ ಏಳನೇ ಪಂದ್ಯವಾಗಿದ್ದು, ಸದ್ಯಕ್ಕೆ ಟೂರ್ನಿಯಲ್ಲಿ ಅತಿ ಕಳಪೆ ತಂಡಗಳು ಎನಿಸಿಕೊಂಡಿರುವ ತಂಡಗಳ ನಡುವಿನ ಸೆಣಸಾಟ ಎನ್ನಬಹುದಾಗಿದೆ.
ಹೌದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ತಂಡಗಳು ಎನಿಸಿಕೊಂಡಿವೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ 6 ಪಂದ್ಯಗಳನ್ನಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 2 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತಿದ್ದು, 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಹ ಟೂರ್ನಿಯಲ್ಲಿ ಇಲ್ಲಿಯವರೆಗೂ 6 ಪಂದ್ಯಗಳನ್ನಾಡಿದ್ದು, ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತು ಕೇವಲ 2 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹೀಗೆ ಈ ಬಾರಿಯ ಟೂರ್ನಿಯಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚು ಕಂಡಿರುವ ಈ ತಂಡಗಳು ಮುಖಾಮುಖಿಯಾಗುತ್ತಿದ್ದು, ಕಳಪೆ ತಂಡಗಳ ಕಾಳಗದಲ್ಲಿ ಯಾವ ತಂಡ ಗೆಲ್ಲಲಿದೆ ಕಾದು ನೋಡಬೇಕಿದೆ.












Click it and Unblock the Notifications