IPL 2023: ಕಾಮೆಂಟೇಟರ್ ಆಕಾಶ್ ಚೋಪ್ರಾಗೆ ಕೋವಿಡ್ ಸೋಂಕು!
ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ವೀಕ್ಷಕ ವಿವರಣೆಗಾರರಲ್ಲಿ ಒಬ್ಬರಾಗಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ, ಆಕಾಶ್ ಚೋಪ್ರಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಮಂಗಳವಾರ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು, ಈಗ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಸ್ವತಃ ಆಕಾಶ್ ಚೋಪ್ರಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
45 ವರ್ಷದ ಆಕಾಶ್ ಚೋಪ್ರಾ, ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರೋಗಲಕ್ಷಣಗಳು ಸೌಮ್ಯವಾಗಿದೆ ಎಂದು ಹೇಳಿದ್ದು, ಕೆಲವು ದಿನಗಳ ಕಾಲ ಕಾಮೆಂಟರಿ ಮಾಡುವುದರಿಂದ ದೂರುವಿರುವುದಾಗಿ ತಿಳಿಸಿದ್ದಾರೆ. " ಕೋವಿಡ್‌ಗೆ ಕಾಟ್ ಮತ್ತು ಬೌಲ್ಡ್ ಆಗಿದ್ದೇನೆ, ಹೌದು ಕೊರೊನಾ ಸೋಂಕಿಗೆ ತುತ್ತಾಗಿದ್ದೇನೆ, ಲಕ್ಷಣಗಳು ಸೌಮ್ಯವಾಗಿವೆ. ಎಲ್ಲವೂ ನಿಯಂತ್ರಣದಲ್ಲಿದೆ" ಎಂದು ಆಕಾಶ್ ಚೋಪ್ರಾ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

"ಕೆಲವು ದಿನಗಳ ಕಾಲ ಕಾಮೆಂಟರಿ ಮಾಡುವುದರಿಂದ ದೂರವಿರುತ್ತೇನೆ. ಟಾಟಾ ಐಪಿಎಲ್‌ನಲ್ಲಿ ಮತ್ತೆ ಮರಳಲು ಆಶಿಸುತ್ತೇನೆ" ಎಂದು ಹೇಳಿದರು. ಮಾರ್ಚ್ 31ರಿಂದ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಡಿಜಿಟಲ್ ಪ್ರಸಾರಕರಾದ ಜಿಯೋ ಸಿನಿಮಾಗಾಗಿ ಅವರು ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದರು. ಮಾತ್ರವಲ್ಲದೆ ಪಂದ್ಯಗಳ ಬಳಿಕ, ವಿಶ್ಲೇಷಣೆ ಮಾಡುವಲ್ಲಿ ಪ್ರಸಿದ್ಧವಾಗಿದ್ದಾರೆ.
ಎಲ್ಲರ ಮೇಲೆ ಹೆಚ್ಚಿನ ನಿಗಾ
ಕಾಮೆಂಟರಿ ಮಾತ್ರವಲ್ಲದೆ, ಮಾಜಿ ಕ್ರಿಕೆಟಿಗರು ಇತರ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ, ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಸುರಕ್ಷತೆಯ ಮೇಲೆ ಪ್ರಸಾರಕರು ಹೆಚ್ಚಿನ ನಿಗಾ ವಹಿಸಿದ್ದಾರೆ. ಕಳೆದ ಮೂರು ಆವೃತ್ತಿಯಲ್ಲಿ ಕೊರೊನಾ ಸೋಂಕಿನಿಂದ ಐಪಿಎಲ್ ಮೇಲೆ ಹೆಚ್ಚಿನ ಪರಿಣಾಮ ಬೀರಿತ್ತು. ಬಯೋ ಬಬಲ್‌ನಲ್ಲಿ ಆಟಗಾರರನ್ನು ಇರಿಸಿ ಪಂದ್ಯಗಳನ್ನು ಆಡಲಾಗಿತ್ತು.

ಮೈದಾನಗಳಿಗೆ ಪ್ರೇಕ್ಷಕರ ಪ್ರವೇಶವನ್ನು ಕೂಡ ನಿಷೇಧಿಸಲಾಗಿತ್ತು. ಕೆಲವು ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿಸಲಾಗಿತ್ತು. ಮೂರು ವರ್ಷಗಳ ಬಳಿಕ ಐಪಿಎಲ್ ಸಾಂಪ್ರದಾಯಿಕ ಶೈಲಿಗೆ ಮರಳಿದೆ, ತವರು ಮತ್ತು ಹೊರಗಿನ ಶೈಲಿಯಲ್ಲಿ ಈ ಬಾರಿ ಪಂದ್ಯಗಳು ನಡೆಯುತ್ತಿದ್ದು, ತವರಿನ ಅಭಿಮಾನಿಗಳ ಬೆಂಬಲದಲ್ಲಿ ಪಂದ್ಯಗಳು ನಡೆಯುತ್ತಿವೆ. ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪರಿಣಾಮ, ಎಲ್ಲಾ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದಾರೆ.
ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು
ಅಭಿಮಾನಿಗಳು ಕ್ರಿಕೆಟ್ ಹಬ್ಬವನ್ನು ಸಂಭ್ರಮಿಸುತ್ತಿರುವ ಬೆನ್ನಲ್ಲೇ, ಕೋವಿಡ್-19 ಸಾಂಕ್ರಾಮಿಕದ ಭೀತಿ ಮತ್ತೆ ಎದುರಾಗಿದೆ. ಕಳೆದ ಒಂದು ವಾರದಿಂದ ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಹೊಸದಾಗಿ 3,038 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಸದ್ಯ ದೇಶದಲ್ಲಿ ಸಕ್ರಿಯ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 21,179ಕ್ಕೆ ಏರಿಕೆಯಾಗಿದೆ.

ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದಲ್ಲಿ ಮುಂದಿನ ದಿನಗಳಲ್ಲಿ ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಗೆ ಹೊಸ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ಸದ್ಯ ಕಡ್ಡಾಯ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರದಂತಹ ನಿಯಮಗಳನ್ನು ಸಡಿಲಿಸಲಾಗಿದ್ದು, ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ, ಮಾಸ್ಕ್ ಕಡ್ಡಾಯ ಮಾಡುವುದು, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಡುವ ಸಾಧ್ಯತೆ ಇದೆ. ಸದ್ಯ ಆಟಗಾರರಲ್ಲಿ ಕೊರೊನಾ ಸೋಂಕು ಪತ್ತೆಯಾದರೆ ಒಂದು ವಾರಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ಸೂಚನೆ ನೀಡಲಾಗಿದೆ.












Click it and Unblock the Notifications