ಧಾರವಾಡ; ಲಾನ್ ಟೆನಿಸ್ ಟೂರ್ನಿ ಅರ್ಹತಾ ಸುತ್ತಿನ ಪಂದ್ಯಗಳು ಆರಂಭ
ಧಾರವಾಡ, ಅಕ್ಟೋಬರ್ 15; ವಿದ್ಯಾಕಾಶಿ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಟೂರ್ನಿಮೆಂಟ್ 2023ರ ಅರ್ಹತಾ ಸುತ್ತಿನ ಪಂದ್ಯಾವಳಿಗೆ ಚಾಲನೆ ಸಿಕ್ಕಿದೆ. ಅಕ್ಟೋಬರ್ 15 ರಿಂದ 22ರ ತನಕ ಪಂದ್ಯಾವಳಿಗಳು ನಡೆಯಲಿದ್ದು, ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಈ ಪಂದ್ಯಾವಳಿಯ ಆತಿಥ್ಯ ವಹಿಸಿಕೊಂಡಿದೆ.
17 ವರ್ಷಗಳ ನಂತರ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ ವಿಶ್ವ ಟೆನಿಸ್ ಟೂರ್ ಡಾಲರ್ 25 ಸಾವಿರ ಬಹುಮಾನ ಮೊತ್ತದ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಟೆನಿಸ್ ಪಂದ್ಯಾವಳಿ ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ರಾಜಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿರುವ ಐದು ಹಾರ್ಡ್ ಕೋರ್ಟ್ ಅಂಗಳಗಳಲ್ಲಿ ನಡೆಯಲಿದೆ.

ಪಂದ್ಯಾವಳಿಯ ವಿವರಗಳು; ಧಾರವಾಡ ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷರು, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪಂದ್ಯಾವಳಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜಗತ್ತಿನ ವಿವಿಧ 20 ರಾಷ್ಟ್ರಗಳಿಂದ 44 ಟೆನಿಸ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇದರಲ್ಲಿ 12 ಜನರು ಭಾರತೀಯ ಆಟಗಾರರು ಇದ್ದಾರೆ.
ಪಂದ್ಯಾವಳಿಯಲ್ಲಿ ಭಾರತ, ಅಮೆರಿಕ, ಫ್ರಾನ್ಸ್, ಜಪಾನ್, ಮಲೇಷ್ಯಾ, ನೆದರ್‌ಲ್ಯಾಂಡ್, ಕೋರಿಯಾ, ಸ್ವೀಡನ್, ಗ್ರೇಟ್ ಬ್ರಿಟನ್, ಇಟಲಿ, ವಿಯಟ್ನಾಂ, ಆಸ್ಟ್ರೇಲಿಯಾ, ನೇಪಾಳ, ಸ್ವೀಜ್ಜರ್‌ಲ್ಯಾಂಡ್, ತೈಪೇ, ಅರ್ಜೆಂಟಿನಾ, ಉಕ್ರೇನ್, ಜರ್ಮನಿ, ಇರಾಕ್ ಮತ್ತು ಕೆಮರೂನ್ ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಈ ಪಂದ್ಯಾವಳಿ ಒಟ್ಟು 32 ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು 32 ಮೇನ್ ಡ್ರಾ ಪಂದ್ಯಗಳನ್ನು ಒಳಗೊಂಡಿದೆ. ಈ ಪಂದ್ಯಗಳು ಅಕ್ಟೋಬರ್ 15, 16ರಂದು ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಭಾರತದ 18 ಸೇರಿದಂತೆ ಒಟ್ಟು 27 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಡ್ರಾ ಪಂದ್ಯಗಳು ಅಕ್ಟೋಬರ್ 17 ರಿಂದ ನಡೆಯಲಿವೆ.
ಡಬಲ್ಸ್ ಪಂದ್ಯಗಳಲ್ಲಿ ನೇರವಾಗಿ ಮೇನ್ ಡ್ರಾ ಇರುತ್ತವೆ. 16 ಜೋಡಿಗಳು ಡಬಲ್ಸ್‌ನಲ್ಲಿ ಭಾಗವಹಿಸುತ್ತವೆ. ಪ್ರತಿ ಪಂದ್ಯ ಬೆಸ್ಟ್ ಆಫ್ ಫೈವ್ ಸೆಟ್ಸ್ ಇರಲಿದೆ. ಅಂತಿಮ ಪಂದ್ಯಗಳು ಡಬಲ್ಸ್ ಹಾಗೂ ಸಿಂಗಲ್ಸ್ ಕ್ರಮವಾಗಿ ಅಕ್ಟೋಬರ್ 21 ಹಾಗೂ 22ರಂದು ನಡೆಯಲಿವೆ. ಬಹುಮಾನ ಮೊತ್ತ ಮತ್ತು ಪಂದ್ಯಾವಳಿಯ ಖರ್ಚಿಗಾಗಿ ಪ್ರಾಯೋಜಕರಿಂದ ನಿಧಿ ಸಂಗ್ರಹಿಸಲಾಗಿದೆ. ಕ್ರೀಡಾ ಪ್ರೇಮಿಗಳಿಗೆ ಪಂದ್ಯ ವೀಕ್ಷಿಸಲು ಮತ್ತು ಕ್ರೀಡಾಪಟುಗಳಿಗೆ ವಸತಿ ಹಾಗೂ ಇತರ ಸೌಲಭ್ಯಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಟೆನಿಸ್ ಪಂದ್ಯಾವಳಿಗಳು ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿವೆ. ಪ್ರೇಕ್ಷಕರಿಗೆ ಪಂದ್ಯಾವಳಿಗಳನ್ನು ವೀಕ್ಷಣೆ ಮಾಡಲು ಮುಕ್ತ ಅವಕಾಶವಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಡಿಡಿಎಲ್‌ಟಿಎ ಆವರಣದಲ್ಲಿ ಈಗ 5 ಸುಸಜ್ಜಿತ ಸಿಂಥೆಟಿಕ್ ಕೋರ್ಟ್, ಹೊನಲು ಬೆಳಕು, ಜಿಮ್, ಆಟಗಾರರ ಡ್ರೆಸ್ಸಿಂಗ್ ರೂಂ, ಕ್ಲಬ್ ಹೌಸ್ ಇತ್ಯಾದಿ ಅತ್ಯಾಧುನಿಕ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾ ಪ್ರೇಮಿಗಳಿಗೆ ಐಟಿಎಫ್ ಪಂದ್ಯಾವಳಿ ಶ್ರೇಷ್ಠ ಟೆನಿಸ್ ರಸದೌತಣ ನೀಡಲು ಸಿದ್ಧವಾಗಿದೆ.
ಗುರುದತ್ತ ಹೆಗಡೆ ಮಾತನಾಡಿ, "ಲಾನ್ ಟೆನಿಸ್ ತರಬೇತಿಗೆ ಉತ್ತಮ ತರಬೇತುದಾರರ ಸೌಲಭ್ಯವಿದೆ. ಮಕ್ಕಳಲ್ಲಿ ಲಾನ್ ಟೆನಿಸ್ ಆಸಕ್ತಿ ಬೆಳಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 25 ಸಾವಿರ ಡಾಲರ್ (20 ಲಕ್ಷ ರೂ.) ಮೊತ್ತದ ಪ್ರಶಸ್ತಿ ಹಣ ಈ ಪಂದ್ಯಾವಳಿಯಲ್ಲಿ ಸಿಗಲಿದೆ" ಎಂದು ಹೇಳಿದ್ದಾರೆ.
"ಅಂತಾರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿ ಹಿನ್ನಲೆಯಲ್ಲಿ ಧಾರವಾಡ ಲಾನ್ ಟೆನಿಸ್ ಸಂಸ್ಥೆಯ ಸದಸ್ಯತ್ವ ಶುಲ್ಕದಲ್ಲಿ ಶೇ. 25 ರಷ್ಟು ವಿನಾಯಿತಿ ನೀಡಿದೆ. ಈ ಮೂಲಕ ಆಸಕ್ತರಿಗೆ ಸದಸ್ಯತ್ವ ಪಡೆಯಲು ಸೀಮಿತ ಅವಧಿಯ ಅವಕಾಶ ನೀಡಲಾಗಿದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications