ಟೆಸ್ಟ್‌ನಲ್ಲಿ ಗೆಲುವಿನ ಟ್ರ್ಯಾಕ್‌ಗೆ ಭಾರತ ಮರಳುವುದು ಯಾವಾಗ? ಕಳೆದ 9 ಟೆಸ್ಟ್ ಪಂದ್ಯಗಳಲ್ಲಿ ಕೇವಲ 1 ಜಯ
ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್‌ಗಳಿಂದ ಸೋತಿದೆ. ಈ ಮೂಲಕ ಆಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ 0-1ರಿಂದ ಹಿನ್ನಡೆ ಅನುಭವಿಸುತ್ತಿದೆ. ಟೀಮ್ ಇಂಡಿಯಾಕ್ಕೆ ಟೆಸ್ಟ್ ಪಂದ್ಯಗಳಲ್ಲಿ ಸೋಲು ಬಹುವಾಗಿ ಕಾಡುತ್ತಿದೆ. ಕಳೆದ 9 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ನೀಡಿದ ಪ್ರದರ್ಶನ ನಿಜಕ್ಕೂ ಚಿಂತೆಯ ಗೆರೆಗಳನ್ನು ಏಳುವಂತೆ ಮಾಡಿವೆ. ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಪ್ರವೇಶಿಸಿದ್ದ ಭಾರತ, ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲಿ ಸೋಲು ಕಂಡು ನಿರಾಸೆಯ ಅನುಭಿಸಿದೆ.
ಟೀಮ್ ಇಂಡಿಯಾ 9 ಟೆಸ್ಟ್ ಪಂದ್ಯಗಳನ್ನು ಒಮ್ಮೆ ಹಿಂತಿರುಗಿ ನೋಡಿದಾಗ, ಕಳಪೆ ಪ್ರದರ್ಶನದ ಕಥೆ ಎದ್ದು ಕಾಣುತ್ತದೆ. ಈ ಅಂಕಿ ಅಂಶಗಳಲ್ಲಿ ವಿಶ್ವದ ಬಹುತೇಕ ತಂಡಗಳು ಸಹ ಟೀಮ್ ಇಂಡಿಯಾಕ್ಕಿಂತ ಮುಂದಿವೆ. ಅಷ್ಟೇ ಏಕೆ ಪಾಕಿಸ್ತಾನ ಸಹ ಟೀಮ್ ಇಂಡಿಯಾಕ್ಕಿಂತ ಉತ್ತಮ ಪ್ರದರ್ಶನ ನೀಡಿದೆ.

ಭಾರತ ತಂಡಕ್ಕೆ ಟೆಸ್ಟ್ ಸರಣಿಯಲ್ಲಿ ಸೋಲು ಎಂಬುದು ಕಳೆದ ಆರು ತಿಂಗಳಿನಿಂದ ಕಾಡುತ್ತಿದೆ. ಭಾರತ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಆಡಿದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಸೋಲು ಕಂಡಿತು. ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯೂಜಿಲೆಂಡ್ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಅಬ್ಬರಿಸಿದೆ. ನ್ಯೂಜಿಲೆಂಡ್, ಸರಣಿ ಜಯ ಸಾಧಿಸಬಹುದು ಎಂದು ಯಾರು ಊಹಿಸರಲು ಸಹ ಸಾಧ್ಯವಿಲ್ಲ. ಆದರೆ, ಟೀಮ್ ಇಂಡಿಯಾ ತಾನೇ ಮಾಡಿದ ತಪ್ಪಿನಿಂದ ಇಂತಹ ಒಂದು ಹೀನಾಯ ಸೋಲು ಕಂಡಿದೆ.
ರೋಹಿತ್ ಪಡೆಯ ಕಿವಿ ಹಿಂಡಿದ್ದ ಕಿವೀಸ್
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿತು. ಈ ವೇಳೆ ಪರ್ತ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಮೊದಲ ಟೆಸ್ಟ್ ಪಂದ್ಯ ಗೆದ್ದಿತು. ಇದಾದ ಬಳಿಕ ಆಸೀಸ್ ಆರ್ಭಟ ನಡೆಸಿತು. ಇಲ್ಲಿಂದ ಟೀಮ್ ಇಂಡಿಯಾ ಚೇತರಿಸಿಕೊಳ್ಳುವಲ್ಲಿ ವಿಫಲವಾಯಿತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಹ್ಯಾಟ್ರಿಕ್ ಬಾರ್ಡರ್ ಗವಾಸ್ಕರ್ ಸರಣಿಯನ್ನು ಗೆಲ್ಲುವ ಕನಸು ಹೊಂದಿದ್ದ ರೋಹಿತ್ ಶರ್ಮಾ ಪಡೆಗೆ, ಆಸೀಸ್ ಶಾಕ್ ನೀಡಿತು.

ಹಿಂದಿನದೆಲ್ಲಾ ಮರೆತು 2025-27ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹೊಸ ಚಕ್ರದಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಲೀಡ್ಸ್‌ನಲ್ಲಿ ಶುಭಮನ್ ಗಿಲ್ ಪಡೆಯ ಆಸೆ ನುಚ್ಚುನೂರಾಯಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಸವಾಲು ಎಂದೇ ಹೇಳುವ 371 ರನ್‌ಗಳನ್ನು ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಅನಾಯಸವಾಗಿ ಮುಟ್ಟಿ ಅಬ್ಬರಿಸಿತು. ಈ ಮೂಲಕ ಟೀಮ್ ಇಂಡಿಯಾ ಆಡಿದ 9 ಟೆಸ್ಟ್ ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿತು.
ಪಾಕ್ ಮೂರು ಗೆಲುವು
ವಿಶ್ವದ ಬೇರೆ ತಂಡಗಳು ಕಳೆದ 9 ಟೆಸ್ಟ್ ಪಂದ್ಯಗಳ ಇತಿಹಾಸವನ್ನು ನೊಡಿದರೆ, ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸಹ ತಮ್ಮ ಘನತೆಗೆ ತಕ್ಕ ಪ್ರದರ್ಶನ ನೀಡಿವೆ. ಇನ್ನು ಪಾಕ್ ಸಹ 9 ಟೆಸ್ಟ್ ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ಗೆಲುವಿನ ಟ್ರ್ಯಾಕ್‌ಗೆ ಮರಳುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಆಟಗಾರರು ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಮತ್ತೊಮ್ಮೆ ಏರಲು ಸಾಧ್ಯ.












Click it and Unblock the Notifications