ಐಸಿಸಿ ವಿಶ್ವಕಪ್: ಸೇಡಿನ ಪಂದ್ಯಕ್ಕೆ ಸಜ್ಜಾದ ಭಾರತ, ಕಿವೀಸ್ ಪಡೆಯ ಕಿವಿ ಹಿಂಡಿ ಕಳಿಸುವುದು ಗ್ಯಾರಂಟಿ!
ಅದು 9 ಜುಲೈ 2019, ಭಾರತ ಕ್ರಿಕೆಟ್ ಟೀಂ ಕನಸು ಮಾತ್ರವಲ್ಲ ಶತಕೋಟಿ ಭಾರತೀಯ ಹೃದಯಗಳು ನರಳಿದ ದಿನ. ಇನ್ನೇನು ಭಾರತ ಕ್ರಿಕೆಟ್ ತಂಡ 3ನೇ ಬಾರಿ ವಿಶ್ವಕಪ್ ಗೆದ್ದು ಐಸಿಸಿ ಟ್ರೋಫಿಗೆ ಮುತ್ತಿಡಲಿದೆ ಅಂತಾ ಕೋಟ್ಯಂತರ ಭಾರತೀಯರು ಕಾಯುತ್ತಿದ್ರು. ಆದರೆ ಅದೇ ಸಮಯಕ್ಕೆ ಕಿವೀಸ್ ಪಡೆಯ ಬೌಲರ್‌ಗಳು ಭಾರತಕ್ಕೆ ವಿಲನ್ ಆಗಿದ್ರು, ಕೇವಲ 240 ರನ್ ಗುರಿ ಬೆನ್ನು ಹತ್ತಿದ್ದ ಭಾರತ ತಂಡ 221 ರನ್‌ಗೆ ಆಲೌಟ್ ಆಗಿತ್ತು. ಹೀಗೆ ಆ ದಿನದ ಸೋಲಿಗೆ ಇಂದು ರಿವೇಂಜ್ ಪಕ್ಕಾ ಎನ್ನಲಾಗ್ತಿದೆ.
ಭಾರತ VS ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. 2023ರ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಇಂದು ಮಧ್ಯಾಹ್ನ 02 ಗಂಟೆಗೆ ಆರಂಭ ಆಗಲಿದೆ. 2019ರ ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ, ಈಗ 2023 ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಮ್ಯಾಚ್‌ನಲ್ಲಿ ಗೆಲ್ಲುವ ಮೂಲಕ ರಿವೇಂಜ್ ತೆಗೆದುಕೊಳ್ಳಲು ಸಿದ್ಧವಾಗಿದೆ. ಭಾರತ, ನ್ಯೂಜಿಲೆಂಡ್ ಮಧ್ಯೆ ರಣಕಣ ನಳನಳಿಸುತ್ತಿದ್ದು, ಕಿವೀಸ್ ಪಡೆಯ ಕಿವಿ ಹಿಂಡಿ ಮನೆಗೆ ಕಳುಹಿಸಲು ಭಾರತದ ಆಟಗಾರರ ಪಡೆ ಸಜ್ಜಾಗಿದೆ.

ಭಾರತೀಯನಿಂದಲೇ ಭಾರತ ತಂಡಕ್ಕೆ ಸವಾಲು?
ನ್ಯೂಜಿಲೆಂಡ್ ತಂಡದ ಆಟಗಾರ ರಚಿನ್ ರವೀಂದ್ರ ಭಾರತ ಮೂಲದವರು. ರಚಿನ್ ತಂದೆ ಊರು ನಮ್ಮ ಬೆಂಗಳೂರು. ಆದರೆ ನ್ಯೂಜಿಲೆಂಡ್ ನೆಲದಲ್ಲಿ ಉದ್ಯೋಗದ ಕಾರಣಕ್ಕೆ ಹೋಗಿ, ನೆಲೆಸಿದ್ದ ಅವರಿಗೆ ರಚಿನ್ ಜನಿಸಿದ್ದರು.
ಹೀಗೆ ಭಾರತ ಮೂಲದ ನಂಟು ಹೊಂದಿರುವ ರಚಿನ್ ರವೀಂದ್ರ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ. ಭಾರತ ತಂಡದ ವಿರುದ್ದವು ಉತ್ತಮ ರನ್‌ರೇಟ್ ಹೊಂದಿದ್ದಾರೆ. ಇಂದಿನ ಪಂದ್ಯದಲ್ಲಿ ಕೂಡ, ಭಾರತ ತಂಡಕ್ಕೆ ರಚಿನ್ ದೊಡ್ಡ ಸವಾಲಾಗುವ ಸಾಧ್ಯತೆ ಇದೆ. ಹೀಗೆ ರಚಿನ್ ವಿಕೆಟ್ ಬೀಳಿಸಲು ರಣತಂತ್ರ ರೆಡಿಯಾಗಿದೆ.
ಕ್ರಿಕೆಟ್ ಜಗತ್ತಿನ ಕಣ್ಣು ಭಾರತದ ಮೇಲೆ
ಎಲ್ಲವನ್ನೂ ನೋಡುವುದಾದರೆ ಭಾರತ ತಂಡ ಈ ಬಾರಿಯೂ ಫೈನಲ್ ಪ್ರವೇಶ ಮಾಡುವುದು ಬಹುತೇಕ ಪಕ್ಕಾ. ಆದರೆ ನ್ಯೂಜಿಲೆಂಡ್ ತಂಡದ ವಿರುದ್ಧ ಎಚ್ಚರಿಕೆಯ ಹೆಜ್ಜೆ ಇಟ್ಟು, ಕಿವೀಸ್ ಪಡೆಗೆ ಸೋಲು ಕರುಣಿಸಬೇಕಿದೆ. ಈ ಮೂಲಕ ತನ್ನ ಫೈನಲ್ ಹಾದಿಯನ್ನ ಭಾರತವು ಸುಲಭ ಮಾಡಿಕೊಳ್ಳಬೇಕಿದೆ. ಹಾಗೇ 2019ರ ವಿಶ್ವಕಪ್ ಟೂರ್ನಿಯ ಸೇಡು ತೀರಿಸಿಕೊಳ್ಳಲು ಕೂಡ ಇದು ಸಕಾಲವಾಗಿದೆ. ಹೀಗಾಗಿ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಇದೀಗ ನ್ಯೂಜಿಲೆಂಡ್ ಮತ್ತೆ ನಮ್ಮ ಭಾರತ ತಂಡದ ಮೇಲೆ ನೆಟ್ಟಿದೆ.

ಸೋಲು ಇಲ್ಲದ ಸರದಾರ ಭಾರತ!
ಭಾರತ ಏಕದಿನ ವಿಶ್ವಕಪ್ 2023ರ ಟೂರ್ನಿ ಲೀಗ್ ಹಂತದಲ್ಲಿ ಒಟ್ಟು 9 ಪಂದ್ಯ ಆಡಿದೆ. ಹೀಗೆ ಆಡಿದ 9ಕ್ಕೆ 9 ಪಂದ್ಯ ಗೆದ್ದು ಬೀಗಿದೆ. ಈ ಮೂಲಕ 9 ಪಂದ್ಯದಲ್ಲಿ ಗೆದ್ದು 18 ಅಂಕ ಗಳಿಸಿದೆ. ಹಾಗೇ +2.570 ರನ್‌ರೇಟ್ ಮೂಲಕ ಮತ್ತೊಂದು ದಾಖಲೆಯ ಬರೆದಿದೆ.
ಆಸ್ಟ್ರೇಲಿಯಾ ಟೀಂ ವಿರುದ್ಧ ಮೊದಲ ಪಂದ್ಯ ಆಡಿದ್ದ ಭಾರತ ತಂಡ, 6 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು. ಹೀಗೆ ಭಾರತ ತಂಡ ತನ್ನ ಗೆಲುವಿನ ಓಟವನ್ನ ಮುಂದುವರಿಸಿತ್ತು. ಏಕದಿನ ವಿಶ್ವಕಪ್ 2023ರ ಟೂರ್ನಿ 2ನೇ ಪಂದ್ಯದಲ್ಲೂ ಅಫ್ಘಾನಿಸ್ತಾನ ತಂಡದ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿತ್ತು ಭಾರತ.
ಹೇಗಿತ್ತು ಭಾರತದ ಲೀಗ್ ಹಂತದ ಜರ್ನಿ?
ಭಾರತ ತಂಡ, ಏಕದಿನ ವಿಶ್ವಕಪ್ 2023ರ ಟೂರ್ನಿಯ 3ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡಿತ್ತು. ಈ ಮ್ಯಾಚ್‌ನಲ್ಲಿ ಕೂಡ, ಭರ್ಜರಿ ಗೆಲುವು ದಾಖಲಿಸಿದ್ದ ರೊಹಿತ್ ನೇತೃತ್ವದ ಭಾರತ ತಂಡ ಬರೋಬ್ಬರಿ 7 ವಿಕೆಟ್ ಅಂತರದ ಭರ್ಜರಿ ಗೆಲುವು ಕಂಡಿತ್ತು.

4ನೆ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 7 ವಿಕೆಟ್ ಅಂತರದಲ್ಲಿ ಸೋಲಿಸಿ ಅಬ್ಬರಿಸಿತ್ತು ಭಾರತ. ಆ ನಂತರ ನ್ಯೂಜಿಲೆಂಡ್ ವಿರುದ್ಧ ಭರ್ಜರಿ 4 ವಿಕೆಟ್‌ನ ಗೆಲುವು ದಾಖಲಿಸಿದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಶತಕದ ಜಯವನ್ನು ಅಂದರೆ ಭರ್ಜರಿ 100 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿತ್ತು.
ಭಾರತದ ಎದುರು ಡಚ್ಚರು ಡಮಾರ್!
ಇನ್ನು ಶ್ರೀಲಂಕಾ ಕ್ರಿಕೆಟ್ ಟೀಂ ವಿರುದ್ಧ 302 ರನ್ ಅಂತರದ ಗೆಲುವು ಕಂಡಿದ್ದ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು 83 ರನ್‌ಗೆ ಆಲೌಟ್ ಮಾಡಿ, 243 ರನ್ ಅಂತರದ ಜಯ ದಾಖಲಿಸಿತ್ತು. ಅಂತಿಮವಾಗಿ ನೆದರ್ಲೆಂಡ್ಸ್ ತಂಡದ ವಿರುದ್ಧ 160 ರನ್‌ಗಳ ಅಂತರದ ಗೆಲುವು ಪಡೆದಿತ್ತು. ಈ ಮೂಲಕ ಭಾರತ 2023ರ ಐಸಿಸಿ ಏಕದಿನ ವಿಶ್ವಕಪ್‌ನ ತನ್ನ ಲೀಗ್ ಹಂತದ ಕ್ರಿಕೆಟ್ ಜರ್ನಿ ಭರ್ಜರಿಯಾಗಿ ಮುಗಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಕ್ಕೆ ಸಜ್ಜಾಗಿದೆ ಟೀಂ ಇಂಡಿಯಾ.












Click it and Unblock the Notifications