IND vs ENG: ಸಚಿನ್ ಮನಮೋಹಕ ಆಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ನವಿ ಮುಂಬೈನ ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮನಮೋಹಕ ಆಟವನ್ನು ಸವಿದರು. ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವು ಇಂಗ್ಲೆಂಡ್ ಮಾಸ್ಟರ್ಸ್ ವಿರುದ್ಧ 9 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಾಸ್ಟರ್ಸ್ ಭಾರತದ ಬಿಗಿಯಾದ ಬೌಲಿಂಗ್ ದಾಳಿಯೆದುರು ರನ್ ಗಳಿಸಲು ಪರದಾಡಿತು. 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು.

ಮ್ಯಾಡಿ 25 ರನ್ ಗಳಿಸಿದರೆ, ಟಿ ಅಂಬ್ರೋಸ್ 23 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಪರದಾಡಿದರು. ಧವಳ್ ಕುಲಕರ್ಣಿ 3 ವಿಕೆಟ್ ಪಡೆದರೆ, ಅಭಿಮನ್ಯು ಮಿಥುನ್ ಮತ್ತು ಪವನ್ ನೇಗಿ ತಲಾ 2 ವಿಕೆಟ್ ಪಡೆದರು. ವಿನಯ್ ಕುಮಾರ್ 1 ವಿಕೆಟ್ ಪಡೆದರು.
ಸಚಿನ್, ಗುರುಕೀರತ್ ಮನಮೋಹಕ ಆಟ
133 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ ಇಂಗ್ಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಸಚಿನ್ ತೆಂಡೂಲ್ಕರ್ ಅವರ ಮನಮೋಹಕ ಬ್ಯಾಟಿಂಗ್ ನೆರೆದಿದ್ದವರ ಮನ ಗೆದ್ದಿತು. 21 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ 1 ಭರ್ಜರಿ ಸಿಕ್ಸರ್ ಸಹಿತ 34 ರನ್ ಗಳಿಸಿದರು. ಅದರಲ್ಲೂ ಕವರ್ ಡ್ರೈವ್ ಹೊಡೆದು ಬೌಂಡರಿ ಗಳಿಸಿದ್ದು ನೋಡಿ ಅಭಿಮಾನಿಗಳು ರೋಮಾಂಚನಗೊಂಡರು.
ಗುರುಕೀರತ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. 35 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 63 ರನ್ ಗಳಿಸಿದರು. ಯುವರಾಜ್ ಸಿಂಗ್ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 27 ರನ್ ಗಳಿಸಿದರು. 11.4 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದ ಇಂಡಿಯಾ ಮಾಸ್ಟರ್ಸ್ 9 ವಿಕೆಟ್‌ಗಳ ಭರ್ಜರಿ ಗೆಲುವ ಸಾಧಿಸಿತು.
ಇದು ಇಂಡಿಯಾ ಮಾಸ್ಟರ್ಸ್ ತಂಡದ ಸತತ ಎರಡನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮಾಸ್ಟರ್ಸ್ ವಿರುದ್ಧ ಸಚಿನ್ ತಂಡ 4 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು.












Click it and Unblock the Notifications