Ind vs Ban: ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ರವಿಚಂದ್ರನ್ ಅಶ್ವಿನ್ ಸ್ಪಿನ್ ದಾಳಿಗೆ ಸಿಲುಕಿದ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲೌಟ್ ಆಯಿತು. ಭಾರತ 280 ರನ್‌ಗಳ ಬೃಹತ್ ಗೆಲುವು ಸಾಧಿಸಿ ಬೀಗಿದೆ. ನಾಲ್ಕನೇ ದಿನವೇ ಟೆಸ್ಟ್ ಪಂದ್ಯವನ್ನು ಮುಗಿಸಿರುವ ಭಾರತ ಇದೀಗ ಎರಡನೇ ಟೆಸ್ಟ್ ಪಂದ್ಯದತ್ತ ಕಣ್ಣಿಟ್ಟಿದೆ. ಮುಂದಿನ ಟೆಸ್ಟ್ ಪಂದ್ಯವನ್ನು ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತದ ಅಗ್ರಸ್ಥಾನಕ್ಕೆ ಅಪಾಯ ಕಡಿಮೆಯಾಗಲಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್‌ಗಳಿಗೆ ಆಲೌಟ್ ಆಗಿತ್ತು. ರವಿಚಂದ್ರನ್ ಅಶ್ವಿನ್ 113 ರನ್ ಗಳಿಸಿದ್ದರೆ, ರವೀಂದ್ರ ಜಡೇಜಾ 86 ರನ್ ಗಳಿಸಿದ್ದರು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 149 ರನ್‌ಗಳಿಗೆ ಆಲೌಟ್ ಆಗಿತ್ತು. ಬುಮ್ರಾ 4 ವಿಕೆಟ್ ಪಡೆದಿದ್ದರೆ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರು.

ಅದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿದ್ದಾ ಡಿಕ್ಲೇರ್ ಮಾಡಿಕೊಂಡಿತು. ಶುಭಮನ್ ಗಿಲ್ 119 ರನ್ ಗಳಿಸಿದರೆ, ರಿಷಬ್ ಪಂತ್ 109 ರನ್ ಗಳಿಸಿದ್ದರು. ಭಾರತ ಒಟ್ಟಾರೆ 516 ರನ್‌ಗಳ ಮುನ್ನಡೆ ಸಾಧಿಸುವ ಮೂಲಕ ಬಾಂಗ್ಲಾದೇಶಕ್ಕೆ 317 ರನ್‌ಗಳ ಬೃಹತ್ ಗುರಿ ನೀಡಿತ್ತು.
ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿದ್ದ ಬಾಂಗ್ಲಾದೇಶ ಅದಾಗಲೇ ಸೋಲಿನ ಸುಳಿಗೆ ಸಿಲುಕಿತ್ತು. ನಾಲ್ಕನೇ ದಿನ 76 ರನ್ ಗಳಿಸುವಷ್ಟರಲ್ಲಿ ಇನ್ನು 6 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲನುಭವಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ರವಿಚಂದ್ರನ್ ಅಶ್ವಿನ್, 4ನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು ಬೌಲಿಂಗ್ ಮೂಲಕ ಕಾಡಿದರು. 6 ವಿಕೆಟ್ ಪಡೆದ ಅವರು, ಬೃಹತ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರವೀಂದ್ರ ಜಡೇಜಾ ಕೂಡ 3 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು.
ಈ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರೆಯಲಿದೆ. ಸರಣಿಯ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಸೆಪ್ಟೆಂಬರ್ 27ರಿಂದ ಶುರುವಾಗಲಿದ್ದು, ಆ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ ಭಾರತ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.












Click it and Unblock the Notifications