Champions Trophy Ind vs Ban: ಪ್ರಿನ್ಸ್ ಅಮೋಘ ಶತಕ; ಬಾಂಗ್ಲಾದೇಶ ವಿರುದ್ಧ ಗೆದ್ಧ ಭಾರತ
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು ಚಾಂಪಿಯನ್ ಆಟ ಶುರು ಮಾಡಿದೆ. ಶುಭಮನ್ ಗಿಲ್ ಅಮೋಘ ಶತಕ ಸಿಡಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ ಪಡೆ 35 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ತೌವಿದ್ ಹೃದೋಯ್ ಮತ್ತು ಜೇಕರ್ ಅಲಿ ಅವರ 154 ರನ್‌ಗಳ ಜೊತೆಯಾಟದಿಂದ ಬಾಂಗ್ಲಾದೇಶ ಗೌರವಯುತ ಮೊತ್ತ ಕಲೆಹಾಕಿತು.

ಜೇಕರ್ ಅಲಿ 68 ರನ್ ಗಳಿಸಿದರೆ, ತೌವಿದ್ ಹೃದೋಯ್ 100 ರನ್ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ನೆರವಾದರು. ಅಂತಿಮವಾಗಿ ಬಾಂಗ್ಲಾದೇಶ 49.4 ಓವರ್ ಗಳಲ್ಲಿ 228 ರನ್‌ಗಳಿಗೆ ಆಲೌಟ್ ಆಯಿತು.
ಮೊಹಮ್ಮದ್ ಶಮಿ 5 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದರು. ಐಸಿಸಿ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ಬಾರಿ ವಿಕೆಟ್ ಪಡೆದ ಸಾಧನೆ ಮಾಡಿದರು. ಹರ್ಷಿತ್ ರಾಣಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು.
ಶುಭಮನ್ ಗಿಲ್ ಅಬ್ಬರ
229 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ 46.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 231 ರನ್ ಗಳಿಸುವ ಮೂಲಕ ಭರ್ಜರಿ ಗೆಲುವ ಸಾಧಿಸಿತು. ಫಾರ್ಮ್‌ಗೆ ಮರಳಿದ ರೋಹಿತ್ ಶರ್ಮಾ ಸ್ಪೋಟಕ ಆರಂಭ ನೀಡಿದರು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 7 ಬೌಂಡರಿ ಸಹಿತ 41 ರನ್ ಗಳಿಸಿದರು. ವಿರಾಟ್ ಕೊಹ್ಲಿ ಕೇವಲ 22 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಶುಭಮನ್ ಗಿಲ್ ಮಾತ್ರ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು ಕೊನೆಯವರೆಗೂ ಕ್ರೀಸ್‌ನಲ್ಲಿದ್ದ ಶುಭಮನ್ ಗಿಲ್ 129 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 101 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 15 ರನ್ ಗಳಿಸಿದರು, ಅಕ್ಷರ್ ಪಟೇಲ್ 8 ರನ್ ಗಳಿಸಿದರು. ಕನ್ನಡಿಗ ಕೆಎಲ್ ರಾಹುಲ್ ಶುಭಮನ್‌ಗಿಲ್‌ಗೆ ಉತ್ತಮ ಬೆಂಬಲ ನೀಡಿದರು. 47 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 41 ರನ್ ಗಳಿಸುವ ಮೂಲಕ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.












Click it and Unblock the Notifications