India vs Pakistan: ಕೊಹ್ಲಿ-ರಾಹುಲ್ ಶತಕದ ಅಬ್ಬರ: ಹಲವು ದಾಖಲೆ ಸೃಷ್ಟಿ! ಪಾಕಿಸ್ತಾನಕ್ಕೆ ಬೃಹತ್ ಗುರಿ
ಸೋಮವಾರ ಕೊಲಂಬೋದಲ್ಲಿ ಮಳೆ ನಿಂತ ಬಳಿಕ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅಬ್ಬರಿಸಿದರು. ಪ್ರೇಮದಾಸ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಭಾರತದ ಈ ಇಬ್ಬರು ಅಗ್ರ ಬ್ಯಾಟರ್ ಗಳು ಪಾಕ್ ಬೌಲರ್ ಗಳ ಬೆವರಿಳಿಸಿದರು. ಇಬ್ಬರೂ ಕೂಡ ಶತಕ ಗಳಿಸುವ ಮೂಲಕ ಭಾರತ 50 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 356 ರನ್ ಗಳಿಸಿದ್ದು ಪಾಕಿಸ್ತಾನಕ್ಕೆ ಬೃಹತ್ ಗುರಿ ನೀಡಿದೆ.
ಭಾನುವಾರ ಅತ್ಯುತ್ತಮ ಆರಂಭ ಪಡೆದಿದ್ದ ಭಾರತ ತಂಡದ ಬ್ಯಾಟಿಂಗ್‌ಗೆ ಮಳೆ ಅಡ್ಡಿಯಾಗಿತ್ತು. 24.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು. ಸೋಮವಾರ ಕೂಡ ಮಳೆ ಬಂದ ಕಾರಣ ಪಂದ್ಯವನ್ನು ತಡವಾಗಿ ಆರಂಭಿಸಲಾಯಿತು.

ನಿನ್ನೆ ಕ್ರೀಸ್‌ನಲ್ಲಿದ್ದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಆರಂಭದಲ್ಲಿ ಎಚ್ಚರಿಕೆಯಿಂದಲೇ ಆಡಿದರು. ನಂತರ ರನ್ ಗಳಿಕೆಯ ವೇಗ ಹೆಚ್ಚಿಸಿದ ಉಭಯ ಬ್ಯಾಟರ್ ಗಳು ಅಬ್ಬರಿಸಿದರು. ಬೌಂಡರಿ, ಸಿಕ್ಸರ್ ಗಳನ್ನು ಸಿಡಿಸಿದ ರಾಹುಲ್ ಮತ್ತು ಕೊಹ್ಲಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ 122 ರನ್ ಗಳಿಸಿದರೆ, ರಾಹುಲ್ 106 ಎಸೆತಗಳಲ್ಲಿ 111 ರನ್ ಗಳಿಸಿದರು.
ಅಪರೂಪದ ದಾಖಲೆ ಬರೆದ ಭಾರತ
ಭಾರತ ತಂಡ ಮೂರನೇ ಬಾರಿ ಅಗ್ರ ನಾಲ್ಕು ಬ್ಯಾಟರ್ ಗಳು ಅರ್ಧಶತಕ ಮತ್ತು ಅದಕ್ಕಿಂತ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು. ಈ ಮೊದಲು ಇಂಗ್ಲೆಂಡ್ ವಿರುದ್ಧ ಮತ್ತು 2017ರಲ್ಲಿ ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ತಂಡ ಈ ಸಾಧನೆ ಮಾಡಿತ್ತು. 6 ವರ್ಷಗಳ ಬಳಿಕ ಭಾರತ ಮತ್ತೆ ಆ ಸಾಧನೆ ಮಾಡಿದೆ.
13 ಸಾವಿರ ರನ್ ಪೂರೈಸಿದ ಕೊಹ್ಲಿ
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 13 ಸಾವಿರ ರನ್ ಗಳಿಸಿದ ಸಾಧನೆ ಮಾಡಿದರು. 278 ಪಂದ್ಯಗಳಲ್ಲಿ 267 ಇನ್ನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ 57.57 ಸರಾಸರಿಯಲ್ಲಿ 13020 ರನ್ ಗಳಿಸಿದ ಸಾಧನೆ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ತಮ್ಮ 47 ನೇ ಶತಕ ಪೂರೈಸಿದರು. ಇದುವರೆಗೂ ಅವರು 65 ಅರ್ಧಶತಕಗಳನ್ನು ಗಳಿಸಿದ್ದಾರೆ. ಕೊಲಂಬೋದಲ್ಲಿ ವಿರಾಟ್ ಕೊಹ್ಲಿ ಸತತವಾಗಿ ನಾಲ್ಕು ಶತಕ ಗಳಿಸಿದ ಸಾಧನೆ ಮಾಡಿದರು.

ಕೆಎಲ್ ರಾಹುಲ್ 6ನೇ ಶತಕ
ಕನ್ನಡಿಗ ಕೆಎಲ್ ರಾಹುಲ್ ಗಾಯದಿಂದ ಮರಳಿದ ನಂತರ ಮೊದಲ ಪಂದ್ಯವನ್ನಾಡಿದ್ದು ಶತಕ ಸಿಡಿಸುವ ಮೂಲಕ ಎಲ್ಲಾ ಅನುಮಾನಗಳನ್ನು ಬಗೆಹರಿಸಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡ ಬಳಿಕ ತಂಡದಲ್ಲಿ ಸ್ಥಾನ ಪಡೆದ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮಾಡಿದರು. 106 ಎಸೆತಗಳಲ್ಲಿ 12 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 111 ರನ್ ಗಳಿಸಿದರು. ಈ ಮೂಲಕ 4ನೇ ಕ್ರಮಾಂಕದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
2005ರ ನಂತರ ಭಾರತ ಪಾಕಿಸ್ತಾನದ ವಿರುದ್ಧ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ. 2005ರಲ್ಲಿ ಕೂಡ ಭಾರತ 356 ರನ್ ಗಳಿಸಿದ್ದು ಈ ವರೆಗಿನ ಅತ್ಯಧಿಕ ಸ್ಕೋರ್ ಆಗಿತ್ತು.












Click it and Unblock the Notifications