India vs Pakistan: ಜುಲೈ 19ರಂದು ಭಾರತ-ಪಾಕಿಸ್ತಾನ ಮುಖಾಮುಖಿ
ಮಹಿಳಾ ಏಷ್ಯಾಕಪ್ 2024ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜುಲೈ 19ರಂದು ಏಷ್ಯಾಕಪ್ ಪಂದ್ಯಾವಳಿ ಆರಂಭವಾಗಲಿದ್ದು ಎಂಟು ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಎರಡು ಗುಂಪುಗಳಲ್ಲಿ ನಾಲ್ಕು ತಂಡಗಳು ಸೆಣೆಸಲಿವೆ.
ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದ್ದು, ಜುಲೈ 28ರಂದು ಫೈನಲ್ ಪಂದ್ಯ ನಡೆಯಲಿದೆ. ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ಪಂದ್ಯಾವಳಿ ಆರಂಭದ ದಿನವೇ ನಡೆಯಲಿದೆ.

ಜುಲೈ 19ರಂದು ಭಾರತ ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ತಂಡ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಪಾಕಿಸ್ತಾನಕ್ಕೆ ಮೊದಲ ಪಂದ್ಯವೇ ಕಠಿಣ ಸವಾಲಾಗಿದೆ.
ಪಂದ್ಯ ಯಾವಾಗ?
ಜುಲೈ 19ರಂದು ಶುಕ್ರವಾರ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಏಷ್ಯಾಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಸೆಣೆಸಲಿದ್ದು ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
ಹಾಲಿ ಚಾಂಪಿಯನ್ ಭಾರತ ತಂಡ ಬಲಿಷ್ಠವಾಗಿದ್ದು ಈ ಬಾರಿ ಕೂಡ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ ಮಹಿಳಾ ತಂಡ ಅದೇ ಪ್ರದರ್ಶನವನ್ನು ಏಷ್ಯಾಕಪ್‌ನಲ್ಲಿ ಮುಂದುವರೆಸುವ ವಿಶ್ವಾಸದಲ್ಲಿದೆ.
ಮಹಿಳೆಯರ ಏಷ್ಯಾ ಕಪ್ 2024 ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಮತ್ತೊಂದೆಡೆ, ಪಂದ್ಯಗಳನ್ನು ಭಾರತದಲ್ಲಿನ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವನ್ನು ನೋಡಬಹುದು.
ಉಭಯ ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.
ಪಾಕಿಸ್ತಾನ: ನಿದಾ ದಾರ್ (ನಾಯಕಿ), ಇರಾಮ್ ಜಾವೇದ್, ಸಾದಿಯಾ ಇಕ್ಬಾಲ್, ಅಲಿಯಾ ರಿಯಾಜ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ, ಮುನೀಬಾ ಅಲಿ, ಸಿದ್ರಾ ಅಮೀನ್, ನಜಿಹಾ ಅಲ್ವಿ, ಸೈಯದಾ ಅರೂಬ್ ಶಾ, ನಶ್ರಾ ಸುಂಧು, ತಸ್ಮಿಯಾ ರುಬಾಬ್, ಒಮೈಮಾ ಸೊಹೈಲ್, ತುಬಾ ಹಸನ್.












Click it and Unblock the Notifications