India vs Australia: ಟೀಂ ಇಂಡಿಯಾ ಭರ್ಜರಿ ಪ್ರದರ್ಶನ: ಸರಣಿಯ ಮೊದಲ ಪಂದ್ಯ ಗೆದ್ದ ರಾಹುಲ್ ಪಡೆ
ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಶಮಿ 5 ವಿಕೆಟ್ ಪಡೆಯುವ ಮೂಲಕ ಬೌಲಿಂಗ್‌ನಲ್ಲಿ ಮಿಂಚಿದರೆ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ಸುಲಭ ಗೆಲುವು ಸಾಧಿಸಿತು.
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ ಮಿಚೆಲ್ ಮಾರ್ಷ್ ಅವರ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಶಮಿ ತಮ್ಮ ಮೊದಲ ಓವರ್ ನಲ್ಲೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಿದ್ದರಿಂದ ತಂಡದಲ್ಲಿ ಸ್ಥಾನ ಪಡೆದ ಶಮಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 10 ಓವರ್ ಗಳಲ್ಲಿ 51 ರನ್ ನೀಡಿ 5 ವಿಕೆಟ್ ಪಡೆದುಕೊಂಡರು. ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದುಕೊಂಡರು.
ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 276 ರನ್ ಗಳಿಸಿ ಆಲೌಟ್ ಆಯಿತು. ಡೇವಿಡ್ ವಾರ್ನರ್ 52 ರನ್ ಗಳಿಸಿದರೆ, ಸ್ಟೀವನ್ ಸ್ಮಿತ್ 41, ಲ್ಯಾಬುಸ್ಚಾಗ್ನೆ 39, ಜೋಶ್ ಇಂಗ್ಲಿಸ್ 45 ರನ್ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ನೆರವಾದರು.
ಭಾರತದ ಅದ್ಭುತ ಬ್ಯಾಟಿಂಗ್
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಯುವ ಆಟಗಾರರು ಉತ್ತಮ ಆರಂಭ ನೀಡಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರು ವಿಶ್ರಾಂತಿಯಲ್ಲಿರುವ ಕಾರಣ ಅವಕಾಶ ಗಿಟ್ಟಿಸಿಕೊಂಡ ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಸಾಮರ್ಥ್ಯ ಸಾಬೀತುಪಡಿಸಿದರು.
ಆರಂಭಿಕರಾದ ಶುಭಮನ್ ಗಿಲ್ ಮತ್ತು ಋತುರಾಜ್ ಗಾಯಕ್ವಾಡ್ ಮೊದಲನೇ ವಿಕೆಟ್‌ಗೆ 142 ರನ್ ಕಲೆಹಾಕುವ ಮೂಲಕ ಭಾರತದ ಗೆಲುವನ್ನು ಸುಲಭವಾಗಿಸಿದರು. ಗಾಯಕ್ವಾಡ್ 77 ಎಸೆತಗಳಲ್ಲಿ 71 ರನ್ ಗಳಿಸಿದರೆ, ಗಿಲ್ 63 ಎಸೆತಗಳಲ್ಲಿ 74 ರನ್ ಗಳಿಸಿದರು.
ಶ್ರೇಯಸ್ ಅಯ್ಯರ್ ಕೇವಲ 3 ರನ್ ಗಳಿಸಿ ಔಟಾದರು, ಇಶಾನ್ ಕಿಶನ್ 18 ರನ್ ಗಳಿಸಿ ನಿರ್ಗಮಿಸಿದರು. ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧಶತಕ ಗಳಿಸಿ ಮಿಂಚಿದರು. ಕೆಎಲ್ ರಾಹುಲ್ ಅಜೇಯ 58 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 50 ರನ್ ಗಳಿಸಿ ಔಟಾದರು. 48.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 281 ರನ್ ಗಳಿಸುವ ಮೂಲಕ ಭಾರತ 5 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.












Click it and Unblock the Notifications