India Pakistan Match: ಭಾರತ-ಪಾಕ್ ಪಂದ್ಯದ ಫಲಿತಾಂಶ, ಜ್ಯೋತಿಷಿ ಪೋಸ್ಟ್ ವೈರಲ್
ಬೆಂಗಳೂರು, ಫೆಬ್ರವರಿ 23: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕಿಸ್ತಾನ ಭಾನುವಾರ ಮುಖಾಮುಖಿಯಾಗಲಿವೆ. ಭಾನುವಾರ ಮಧ್ಯಾಹ್ನ ಆರಂಭವಾಗುವ ಈ ಪಂದ್ಯವನ್ನು ವೀಕ್ಷಣೆ ಮಾಡಲು ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಈಗಾಗಲೇ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ ತಂಡ ಪಾಕಿಸ್ತಾನ ವಿರುದ್ಧವೂ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಹೊಂದಿದ್ದಾರೆ. ಭಾರತ ತಂಡ ಗೆಲ್ಲಲಿ ಎಂದು ಹೋಮ, ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಡೆಯಲಿದೆ. ಪಂದ್ಯದ ಕುರಿತು ಸಾಕಷ್ಟು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹೈವೋಲ್ಟೇಜ್ ಪಂದ್ಯ ಇದಾಗಿದ್ದು, ರೋಹಿತ್ ಶರ್ಮಾ ನಾಯಕತ್ವದ ತಂಡ ಮೇಲೆ ಅಭಿಮಾನಿಗಳು ಅಪಾರ ವಿಶ್ವಾಸವನ್ನು ಹೊಂದಿದ್ದಾರೆ.

2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನ ಅದೇ ನೆನಪಿನಲ್ಲಿದೆ. ಆ ಸೋಲಿನ ಸೇಡನ್ನು ಭಾರತ ಮರೆತಿಲ್ಲ. ಈಗಾಗಲೇ ಒಂದು ಪಂದ್ಯವನ್ನು ಸೋತಿರುವ ಪಾಕಿಸ್ತಾನ ಇಂದು ನಡೆಯುವ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದ್ದರಿಂದ ಆಕ್ರಮಣಾಕಾರಿ ಆಟವನ್ನು ನಿರೀಕ್ಷೆ ಮಾಡಲಾಗಿದೆ.
ಜ್ಯೋತಿಷಿ ಪೋಸ್ಟ್ ವೈರಲ್: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪಂದ್ಯದ ಕುರಿತು ಜ್ಯೋತಿಷಿ Prashanth Kini ಸಹ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಇದುವರೆಗೂ 28.1ಕೆ ವ್ಯೂ ಪಡೆದಿದೆ. 536 ಜನರು ಪೋಸ್ಟ್ ಇಷ್ಟಪಟ್ಟಿದ್ದಾರೆ. 38 ಜನರು ರಿ-ಟ್ವೀಟ್ ಮಾಡಿದ್ದಾರೆ.
ಪ್ರಶಾಂತ್ ಕಿಣಿ ಅವರು ತಮ್ಮ ಪೋಸ್ಟ್‌ನಲ್ಲಿ, 'ಚಾಂಪಿಯನ್ಸ್ ಟ್ರೋಫಿ ಪಂದ್ಯದ ಬಗ್ಗೆ ಜನರು ನನ್ನ ಬಳಿ ಕೇಳುತ್ತಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಇಂದು ಇದೆ. ಯಾವ ತಂಡ ಮೊದಲು ಬ್ಯಾಟ್ ಮಾಡುತ್ತದೆಯೋ ಅದು ಗೆಲ್ಲಲಿದೆ' ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಕಿವೀಸ್ ವಿರುದ್ಧ 60 ರನ್‌ಗಳ ಸೋಲು ಕಂಡಿದೆ. ಭಾರತದ ವಿರುದ್ಧ ಇಂದು ತಂಡ ಗೆದ್ದರೆ ಮಾತ್ರ ಮೊಹಮ್ಮದ್ ರಿಜ್ವಾನ್ ಪಡೆ ಸೆಮಿಫೈನಲ್‌ಗೆ ಹೋಗಲಿದೆ. ಆದ್ದರಿಂದ ಪಾಕ್‌ಗೆ ಇದು ಪ್ರತಿಷ್ಠೆ ಮತ್ತು ನಿರ್ಣಾಯಕ ಪಂದ್ಯವಾಗಿದೆ.
ಭಾರತ ತಂಡದಲ್ಲಿ ಶುಭಮನ್ ಗಿಲ್ ಸೇರಿದಂತೆ ಇತರ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಮೊಹಮ್ಮದ್ ಶಮಿ ಸೇರಿ ಇತರ ಬೌಲರ್‌ಗಳು ಪಾಕಿಸ್ತಾವನ್ನು ಕಟ್ಟಿ ಹಾಕಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಪಂದ್ಯ ಆರಂಭವಾಗಲಿದೆ.
ಭಾನುವಾರವೇ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಹೆಚ್ಚಿಸಿದೆ. ಎಲ್ಲಿ ಕುಳಿತು ಮ್ಯಾಚ್ ನೋಡಬೇಕು ಎಂದು ಈಗಾಗಲೇ ಯೋಜನೆ ಸಿದ್ಧಗೊಂಡಿದೆ. ಪಂದ್ಯ ಮುಗಿಯುವ ತನಕ ಇಂದು ಸಿನಿಮಾ, ಹೊರಗೆ ಸುತ್ತಾಡುವುದಕ್ಕೆ ಬ್ರೇಕ್ ಬೀಳಲಿದೆ.
ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾರು ಯಾರು ಇರಲಿದ್ದಾರೆ?, ವಿರಾಟ್ ಕೊಹ್ಲಿ ಎಷ್ಟು ರನ್ ಸಿಡಿಸಲಿದ್ದಾರೆ?. ಯಾರು ಎಷ್ಟು ರನ್ ಬಾರಿಸಲಿದ್ದಾರೆ? ಎಂದು ಈಗಾಗಲೇ ಹಲವಾರು ಲೆಕ್ಕಾಚಾರಗಳು ನಡೆಯುತ್ತಿವೆ. ಭಾರತ ಪಂದ್ಯವನ್ನು ಗೆಲ್ಲಲಿ ಎಂದು ಅಭಿಮಾನಿಗಳು ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ.












Click it and Unblock the Notifications