India vs Bangladesh: ಬ್ಯಾಟಿಂಗ್‌ನಲ್ಲಿ ಭಾರತ ವಿಶ್ವದಾಖಲೆ; ಪಂದ್ಯ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಪಡೆ
ಕಾನ್ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನಾಲ್ಕನೇ ದಿನ ಭಾರತ ಹಲವು ವಿಶ್ವದಾಖಲೆಗಳನ್ನು ಬರೆದಿದೆ. ಮೊದಲ ದಿನ 35 ಓವರ್ ಆಟ ನಡೆದಿದ್ದ ಬಳಿಕ, ಎರಡು ದಿನ ಮಳೆಯಿಂದಾಗಿ ಆಟ ನಡೆಯಲಿಲ್ಲ, ಈ ಪಂದ್ಯವನ್ನು ಗೆಲ್ಲುವ ರಣತಂತ್ರದಿಂದ ಕಣಕ್ಕಿಳಿದ ಭಾರತ ನಾಲ್ಕನೇ ದಿನ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿತು.
ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಆಗಿದೆ. ಬುಮ್ರಾ 3 ವಿಕೆಟ್ ಪಡೆದರೆ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ ತಲಾ ಎರಡು ವಿಕೆಟ್ ಪಡೆದರು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ, ಟೆಸ್ಟ್ ಪಂದ್ಯ ಎನ್ನುವುದನ್ನು ಮರೆತು ಟಿ20 ಮಾದರಿ ಎನ್ನುವಂತೆ ಬ್ಯಾಟಿಂಗ್ ಮಾಡಿತು. ಈ ಮೂಲಕ 5 ಪ್ರಮುಖ ವಿಶ್ವದಾಖಲೆಗಳನ್ನು ನಿರ್ಮಿಸಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 50, 100, 150, 200 ಮತ್ತು 250 ರನ್‌ಗಳನ್ನು ದಾಖಲಿಸಿದ ತಂಡ ಎನಿಸಿಕೊಂಡಿದೆ.
ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಜೈಸ್ವಾಲ್ ಅಬ್ಬರಿಸಿದರು. 3 ಓವರ್ ಗಳಲ್ಲಿ 50 ರನ್ ಗಳಿಸಿದ ಭಾರತ ಟೆಸ್ಟ್ ಇತಿಹಾಸದಲ್ಲಿ ವೇಗವಾಗಿ 50 ರನ್ ದಾಖಲಿಸಿದ ತಂಡ ಎನಿಸಿಕೊಂಡಿತು. ಬಳಿಕ ನಾಯಕ ರೋಹಿತ್ ಶರ್ಮಾ ಔಟಾದರು, ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 10.1 ಓವರ್ ಗಳಲ್ಲಿ ಭಾರತ 100 ರನ್ ಗಳಿಸಿತು.
ಕೆಎಲ್ ರಾಹುಲ್, ಜೈಸ್ವಾಲ್ ಅರ್ಧಶತಕ
ಭಾರತದ ಪರವಾಗಿ ಬಹುತೇಕ ಎಲ್ಲಾ ಬ್ಯಾಟರ್ ಗಳು ವೇಗವಾಗಿ ರನ್ ಗಳಿಸುವ ಉದ್ದೇಶದಿಂದ ಬ್ಯಾಟ್ ಬೀಸಿದರು. ಯಶಸ್ವಿ ಜೈಸ್ವಾಲ್ 51 ಎಸೆತಗಳಲ್ಲಿ 72 ರನ್ ಗಳಿಸಿದರೆ, ಕೆಎಲ್ ರಾಹುಲ್ 43 ಎಸೆತಗಳಲ್ಲಿ 68 ರನ್ ಗಳಿಸಿದರು. ವಿರಾಟ್ ಕೊಹ್ಲಿ 47 ರನ್, ರೋಹಿತ್ ಶರ್ಮಾ 23 ರನ್, ಗಿಲ್ 39 ರನ್ ಗಳಿಸಿದರು. ಅಂತಿಮವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 285 ರನ್ ಗಳಿಸಿದ್ದಾಗ 52 ರನ್‌ಗಳ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತು.
ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ನಾಲ್ಕನೇ ದಿನದಾಟದ ಅಂತ್ಯಕ್ಕೆ 26 ರನ್ ಗಳಿಸುವ ವೇಳೆಗೆ 2 ವಿಕೆಟ್ ಕಳೆದುಕೊಂಡಿದೆ. ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ಆಘಾತ ನೀಡಿದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಭಾರತಕ್ಕೆ ಈ ಪಂದ್ಯ ಗೆಲ್ಲುವುದು ಮಹತ್ವವಾಗಿದೆ. ಐದನೇ ದಿನ ಬಾಂಗ್ಲಾದೇಶವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ, ಚೇಸ್ ಮಾಡಿ ಗೆಲ್ಲುವ ಯೋಜನೆಯಲ್ಲಿದೆ ರೋಹಿತ್ ಶರ್ಮಾ ಪಡೆ.












Click it and Unblock the Notifications