500ನೇ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಶತಕ: ತೆಂಡುಲ್ಕರ್ ದಾಖಲೆ ಹಿಂದಿಕ್ಕಿ, ಬ್ರಾಡ್ಮನ್ ದಾಖಲೆ ಸರಿಗಟ್ಟಿದ ವಿರಾಟ್
5 ವರ್ಷಗಳ ಕಾಯುವಿಕೆ ಕೊನೆಯಾಗಿದೆ, ವಿರಾಟ್ ಕೊಹ್ಲಿ 5 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ಕೊಹ್ಲಿ ಅಮೋಘ ಶತಕ ಸಿಡಿಸಿದರು.
2018ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ವಿದೇಶದಲ್ಲಿ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದರು. ಪರ್ತ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 123 ರನ್ ಗಳಿಸಿದ್ದರು. ಅದಾದ ನಂತರ 5 ವರ್ಷದ ಬಳಿಕ ವಿದೇಶದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ.
500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅವರ ಸಾಧನೆ ಮತ್ತಷ್ಟು ಸ್ಮರಣೀಯವಾಗಿದೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಮಹೇಂದ್ರ ಸಿಂಗ್ ಧೋನಿ ಮಾತ್ರ 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತೀಯ ಆಟಗಾರರಾಗಿದ್ದಾರೆ. ಈ ಸಾಲಿಗೆ ಕೊಹ್ಲಿ ಕೂಡ ಸೇರಿಕೊಂಡಿದ್ದಾರೆ.

ಒಂದು ಶತಕ ಹಲವು ದಾಖಲೆಗಳ ನಿರ್ಮಾಣ
ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 29ನೇ ಟೆಸ್ಟ್ ಶತಕ ಸಿಡಿಸುವ ಮುನ್ನ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (8586) ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರು.
ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಆಸ್ಟ್ರೇಲಿಯಾದ ಸರ್ ಡೊನಾಲ್ಡ್ ಬ್ರಾಡ್ಮನ್ 29 ಟೆಸ್ಟ್ ಶತಕ ಗಳಿಸಿದ್ದು ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದರು. ಭಾರತದ ಪರವಾಗಿ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿಗೆ ಇದು ವೆಸ್ಟ್ ಇಂಡೀಸ್‌ನಲ್ಲಿ ಎರಡನೇ ಟೆಸ್ಟ್ ಶತಕವಾಗಿದೆ. ವಿಂಡೀಸ್ ವಿರುದ್ದ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು ಮೂರು ಶತಕ ಸಿಡಿಸಿದ್ದಾರೆ.
ಸಚಿನ್ ದಾಖಲೆ ಮುರಿದ ಕೊಹ್ಲಿ
ವೆಸ್ಟ್ ಇಂಡೀಸ್‌ನಲ್ಲಿ ಎಲ್ಲಾ ಮಾದರಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ತೆಂಡೂಲ್ಕರ್ ವೆಸ್ಟ್ ಇಂಡೀಸ್‌ನಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ 7 ಶತಕ ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ, ದ್ರಾವಿಡ್, ದಿಲೀಪ್ ಸರ್ದೇಸಾಯಿ ಮತ್ತು ಪಾಲಿ ಉಮ್ರಿಗರ್ ಮೂರು ಶತಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
121 ರನ್ ಗಳಿಸಿ ರನೌಟ್ ಆದ ಕೊಹ್ಲಿ
121 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ರನೌಟ್ ಆಗುವ ಮೂಲಕ ತಮ್ಮ ಇನ್ನಿಂಗ್ಸ್ ಮುಗಿಸಿದರು. 206 ಎಸೆತಗಳಲ್ಲಿ 11 ಬೌಂಡರಿ ಸಹಿತ 121 ರನ್ ಗಳಿಸಿ, ಭಾರತ ಬೃಹತ್ ಮೊತ್ತ ಕಲೆಹಾಕಲು ಆಸರೆಯಾದರು.
ಎರಡನೇ ದಿನದಾಟದಲ್ಲಿ ಕೂಡ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು, ಬೃಹತ್ ಮೊತ್ತ ಕಲೆ ಹಾಕುವತ್ತ ಸಾಗಿದೆ. 108 ಓವರ್ ಗಳಾಗಿದ್ದಾಗ 6 ವಿಕೆಟ್ ಕಳೆದುಕೊಂಡು 369 ರನ್ ಗಳಿಸಿತ್ತು. ಇಶಾನ್ ಕಿಶನ್ ಮತ್ತು ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.












Click it and Unblock the Notifications