India vs WI: ಸಂಜು ಸ್ಯಾಮ್ಸನ್‌ಗೆ ಮತ್ತೆ ಅನ್ಯಾಯ!
ಸಂಜು ಸ್ಯಾಮ್ಸನ್, ಕೇರಳದ ಈ ಪ್ರತಿಭಾವಂತ ಬ್ಯಾಟರ್ ನ ಅದೃಷ್ಟವೇ ಸರಿಯಾಗಿಲ್ಲ ಎನಿಸುತ್ತದೆ. ಅತ್ಯುತ್ತಮ ಪ್ರದರ್ಶನ ನೀಡಿದರೂ ತಂಡಕ್ಕೆ ಆಯ್ಕೆಯಾಗಲ್ಲ, ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಅವಕಾಶ ಸಿಗಲ್ಲ. ಹೌದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ಸಂಜು ಸ್ಯಾಮ್ಸನ್ ಬೆಂಚ್ ಕಾಯುವುದು ಮುಂದುವರೆಸಿದ್ದಾರೆ.
ಸಂಜು ಸ್ಯಾಮ್ಸನ್ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್, ರಿಷಬ್ ಪಂತ್ ಗಾಯಗೊಂಡ ನಂತರ ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ತಂಡದ ಆಯ್ಕೆದಾರರು ಮಾತ್ರ ಇಶಾನ್ ಕಿಶನ್, ಶ್ರೀಕರ್ ಭರತ್ ಅವರಿಗೆ ಮಣೆ ಹಾಕಿತ್ತು.

ಏಕದಿನ ವಿಶ್ವಕಪ್ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ತಂಡವನ್ನು ಅಂತಿಮಗೊಳಿಸಲು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ನಿರ್ಧರಿಸಿದ್ದಾರೆ. ವಿಶ್ವಕಪ್‌ಗೆ ಮುನ್ನ ಭಾರತ 11-12 ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಈಗಲೂ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಂಜು ಸ್ಯಾಮ್ಸನ್ ಬಗ್ಗೆ ನಿರ್ಲಕ್ಷ್ಯ ಯಾಕೆ?
ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಕೂಡ ಸ್ಯಾಮ್ಸನ್ ಅವರನ್ನು ಕಡೆಗಣಿಸಲಾಗಿತ್ತು. ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಯ್ಕೆಯಾಗಿದ್ದರೂ ರೋಹಿತ್ ಶರ್ಮಾ ಮತ್ತು ದ್ರಾವಿಡ್ ಇವರ ಬಗ್ಗೆ ಆಸಕ್ತಿ ತೋರುತ್ತಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೂ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಏಕದಿನ ಅಂಕಿಅಂಶಗಳನ್ನು ನೋಡಿದಾಗ ಸೂರ್ಯಕುಮಾರ್ ಯಾದವ್ ಅವರಿಗಿಂತ ಸಂಜು ಸ್ಯಾಮ್ಸನ್ ಉತ್ತಮ ದಾಖಲೆ ಹೊಂದಿದ್ದಾರೆ ಆದರೂ ಸಂಜು ಸ್ಯಾಮ್ಸನ್‌ರನ್ನು ಕಡೆಗಣಿಸಲಾಗುತ್ತಿದೆ. ಸತತ 16ನೇ ಬಾರಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಕೈತಪ್ಪಿದೆ.
ಕಳೆದ 8 ತಿಂಗಳಿನಲ್ಲಿ ಸೂರ್ಯಕುಮಾರ್ ಯಾದವ್ 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಸತತ ವೈಫಲ್ಯದ ನಡುವೆ ಅವರಿಗೆ ಅವಕಾಶ ಸಿಗುತ್ತಿದೆ ಆದರೆ ಸಂಜು ಸ್ಯಾಮ್ಸನ್ ಅವರನ್ನು ಮಾತ್ರ ಕಡೆಗಣಿಸಲಾಗುತ್ತಿದೆ.
ಏಕದಿನ ಮಾದರಿಯಲ್ಲಿ ಸಂಜು ಸ್ಯಾಮ್ಸನ್ ಅಂಕಿ ಅಂಶ
ಸಂಜು ಸ್ಯಾಮ್ಸನ್ ಆರಂಭಿಕರಿಂದ ಮಧ್ಯಮ ಕ್ರಮಾಂಕದಲ್ಲಿ ಕೂಡ ಬ್ಯಾಟಿಂಗ್ ಮಾಡುವ ಅರ್ಹತೆ ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರಿಗಿಂತ ಉತ್ತಮ ಅಂಕಿ ಅಂಶ ಹೊಂದಿದ್ದಾರೆ. 10 ಏಕದಿನ ಇನ್ನಿಂಗ್ಸ್‌ಗಳಲ್ಲಿ ಸಂಜು ಸ್ಯಾಮ್ಸನ್ 104.76 ಸ್ಟ್ರೈಕ್‌ರೇಟ್‌ನಲ್ಲಿ 66 ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್ 2021ರಲ್ಲಿ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದಾರೆ, ಅಂದಿನಿಂದ ಇದುವರೆಗೂ ಅವರಿಗೆ ಕೇವಲ 11 ಪಂದ್ಯಗಳಲ್ಲಿ ಮಾತ್ರ ಆಡಲು ಅವಕಾಶ ಸಿಕ್ಕಿದೆ.
ಸೂರ್ಯಕುಮಾರ್ ಯಾದವ್ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ ಕೇವಲ 36 ರನ್ ಗಳಿಸಿದ್ದಾರೆ. 14, 0, 0, 0, 19 ಅವರು ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ರನ್‌ಗಳಾಗಿದೆ. 22 ಇನ್ನಿಂಗ್ಸ್‌ಗಳಲ್ಲಿ 23.78 ಸರಾಸರಿಯಲ್ಲಿ 452 ರನ್ ಗಳಿಸಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೂಡ ಸೂರ್ಯಕುಮಾರ್ ಯಾದವ್ ಕೇವಲ 19 ರನ್ ಗಳಿಸಿ ಔಟಾದರು.












Click it and Unblock the Notifications