India vs Pakistan: ಮತ್ತೆ ಸೊನ್ನೆ ಸುತ್ತಿದ ಪಾಕಿಸ್ತಾನ, ಭಾರತಕ್ಕೆ ಅಷ್ಟ ಗೆಲುವಿನ ಗರಿ!

ಭಾರತದ ನೆಲದಲ್ಲಿ, ಭಾರತೀಯರಿಗೆ ಇಂದು ಮತ್ತೊಂದು ಹೆಮ್ಮೆ ಮೂಡಿದೆ. ಏಕೆಂದರೆ ಭಾರತದ ನೆಲದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಭರ್ಜರಿ ಗೆಲುವನ್ನ ಸಾಧಿಸಿದೆ. ಈ ಮೂಲಕ ಭಾರತ ಸಾಂಪ್ರದಾಯಿಕ ಶತ್ರು ಪಾಕಿಸ್ತಾನ ವಿರುದ್ಧ ಅಬ್ಬರಿಸಿದೆ. ರೋಹಿತ್ ಹಾಫ್ ಸೆಂಚ್ಯುರಿ ಸಹಿತ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾ ಸಂಘಟಿತ ಆಟಕ್ಕೆ ಪಾಕ್ ಶರಣಾಗಿದೆ. ನಿರೀಕ್ಷೆಯಂತೆ ಬ್ಲೂ ಬಾಯ್ಸ್ ಸುಲಭದ ಜಯ ಸಾಧಿಸಿದ್ದಾರೆ. ಅಹಮದಾಬಾದ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಬೌಲರ್ಸ್ ಸಫಲರಾಗಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ರೋಹಿತ್ ಪಡೆ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಹಾಗಾದರೆ ಪಂದ್ಯ ಹೇಗಿತ್ತು, ಭಾರತದ ರಣತಂತ್ರ ಹೇಗೆಲ್ಲಾ ವರ್ಕೌಟ್ ಆಯ್ತು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

india-beats-pakistan-by-7-wickets

ಹೋದ ಪುಟ್ಟ.. ಬಂದ ಪುಟ್ಟ..!

ಟೀಮ್ ಇಂಡಿಯಾ ಗೆಲುವಲ್ಲಿ ಮುಖ್ಯವಾಗಿ ಎದ್ದು ಕಾಣುವ ಅಂಶವೇ ಮಿಡ್ಲ್ ಆರ್ಡರ್ ಬೌಲಿಂಗ್. ಟೀಮ್ ಇಂಡಿಯಾ ಮಿಡ್ಲ್ ಆರ್ಡರ್ ಬೌಲಿಂಗ್ ಉತ್ತಮವಾಗಿದೆ ಎಂಬುದನ್ನು ಮತ್ತೆ ಸಾಬೀತಾಗಿದೆ. ಮಧ್ಯದ 13.1 ಓವರ್‌ಗಳಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಸಂಘಟಿತವಾದ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಒಂದು ಹಂತದಲ್ಲಿ ಪಾಕ್ 2 ವಿಕೆಟ್‌ಗೆ 155 ರನ್ ಕಲೆ ಹಾಕಿ ಉತ್ತಮವಾದ ಸ್ಥಿತಿಯಲ್ಲಿ ಇತ್ತು. ಆದ್ರೆ ಸೂಕ್ತ ಸಮಯದಲ್ಲಿ ಬೌಲಿಂಗ್ ಚೇಂಜ್ ಮಾಡಿದ್ದರಿಂದ ಟೀಂ ಇಂಡಿಯಾ ಮೇಲುಗೈ ಸಾಧಿಸಿತು. ಆರಂಭದಲ್ಲಿ ಅಬ್ದುಲ್ ಶಫಿಕ್‌ಗೆ ಖೆಡ್ಡಾ ತೋಡಿದ್ದ ಸಿರಾಜ್ ಪಾಕ್ ನಾಯಕನ ಆಟಕ್ಕೆ ಬ್ರೇಕ್ ಹಾಕಿದರು. ಇಲ್ಲಿಂದ ಪಾಕ್ ತಂಡದ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.

ನೋಡ ನೋಡುತ್ತಿದ್ದಂತೆ ಮುಗಿಯಿತು ಆಟ!

ಪಾಕ್ ಇನಿಂಗ್ಸ್ 30ನೇ ಓವರ್‌ನಲ್ಲಿ 3ನೇ ವಿಕೆಟ್ ಪತವಾಯಿತು. ಇಲ್ಲಿಂದ ಪಾಕ್ ಚೇತರಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಕೇವಲ 36 ರನ್ ಸೇರಿಸುವಷ್ಟರಲ್ಲಿ ಪಾಕ್ ಮುಖ್ಯ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಪಂದ್ಯದ ಯಾವುದೇ ಹಂತದಲ್ಲೂ ಪಾಕ್, ಭಾರತದ ಬೌಲಿಂಗ್ ದಾಳಿಗೆ ಸವಾಲು ಎಸೆಯಲೇ ಇಲ್ಲ. ಭಾರತದ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಸೇರಿ ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಸಮವಾಗಿ ಪಡೆದರು. ಭಾರತದ ಬೌಲಿಂಗ್ ಹೇಗಿತ್ತು ಅಂದ್ರೆ, ಪಾಕಿಸ್ತಾನದ ಮಧ್ಯಮ ಕ್ರಮಾಂಕ ಸಂಪೂರ್ಣ ಶರಣಾಗಿ ವಿಕೆಟ್ ಒಪ್ಪಿಸಿತು. ಪಾಕಿಸ್ತಾನ ಕೇವಲ 191 ರನ್‌ಗಳಿಗೆ ಸರ್ವಪತನ ಕಂಡಿತ್ತು.

ಪಾಕಿಸ್ತಾನದ ಪರ ಮಧ್ಯಮ ಕ್ರಮಾಂಕ & ಕೆಳ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಆಟಗಾರ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಕೆಳ ಕ್ರಮಾಂಕದಲ್ಲಿ ಹಸನ್ ಅಲಿ 12 ರನ್ ಬಾರಿಸಿದ್ದನ್ನು ಬಿಟ್ಟರೆ, ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಸ್ಪರ್ಧಾತ್ಮಕ ಮೊತ್ತದ್ದತ್ತ ಮುಖ ಮಾಡಿದ್ದರೂ ಪಾಕ್ ತಂಡವನ್ನು ಭಾರತದ ಬೌಲಿಂಗ್ ಪಡೆ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು.

india-beats-pakistan-by-7-wickets

ಭಾರತಕ್ಕೆ ಆರಂಭದಲ್ಲೇ ಆಘಾತ!

ಪಾಕ್ ವಿರುದ್ಧ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವಿನ ಓಟವನ್ನ ಮುಂದುವರಿಸುವುದೆ. ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕೇವಲ 191 ರನ್‌ಗೆ ಆಲೌಟ್ ಆಯಿತು. ಪಾಕಿಸ್ತಾನ ತಂಡವನ್ನು 200 ರನ್‌ಗಳ ಒಳಗೆ ಕಟ್ಟಿಹಾಕುವಲ್ಲಿ ಭಾರತ ತಂಡದ ಬೌಲರ್ಸ್ ಯಶಸ್ವಿಯಾದರು. ಇನ್ನು ಭಾರತ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದಾಗ ಗಿಲ್ ಔಟ್ ಆಗಿ ಪೆವಿಲಿಯನ್ ಸೇರಿ ಆತಂಕ ಹುಟ್ಟಿಸಿದ್ದರು. ಅಲ್ಲದೆ ಕೊಹ್ಲಿ ಕೂಡ ಬೇಗ ಔಟ್ ಆದರು. ಇದು ಭಾರತಕ್ಕೆ ಮೊದಲ ಆಘಾತವಾಗಿತ್ತು, ಆದರೆ ರೋಹಿತ್ ಶರ್ಮಾ ಮೈಕೊಡವಿ ನಿಂತರು.

ರೋಹಿತ್ ಎದುರು ಪಾಕ್ ಬೌಲಿಂಗ್ ಧೂಳಿಪಟ

ಪಾಕಿಸ್ತಾನ ತಂಡದ ವಿರುದ್ಧ ಹೆಚ್ಚು ರನ್ ರೇಟ್ ಹೊಂದಿರುವ ಕೊಹ್ಲಿ ಇಂದು, ಅತಿ ಬೇಗನೇ ಔಟ್ ಆದರು. 16 ರನ್‌ ಗಳಿಸಿ ವಿರಾಟ್‌ ವಿಕೆಟ್‌ ಒಪ್ಪಿಸಿದರು. ಆದ್ರೆ ರೋಹಿತ್ ಮಾತ್ರ ತಮ್ಮ ಅಬ್ಬರದ ಬ್ಯಾಟಿಂಗ್ ನಿಲ್ಲಿಸಲಿಲ್ಲ. ಹೀಗಾಗಿ ಪಾಕ್ ಬೌಲಿಂಗ್ ಪಡೆ ತಂತ್ರ ಧೂಳಿಪಟ ಮಾಡಿದ ರೋಹಿತ್ 63 ಬೌಲ್‌ಗಳಲ್ಲಿ 86 ರನ್ ಚಚ್ಚಿ ಶತಕದ ಹೊಸ್ತಿಲಲ್ಲಿ ಎಡವಿದರು.

6 ಬೌಂಡರಿ ಹಾಗೂ 6 ಸಿಕ್ಸರ್‌ನ ಸಿಡಿಸಿ ರೋಹಿತ್‌ ಹೊಸ ದಾಖಲೆ ಬರೆದರು. ಇನ್ನು ರೋಹಿತ್ ಶರ್ಮಾ ಔಟ್ ಆದ ನಂತರ ಬಂದ ಕೆ.ಎಲ್. ರಾಹುಲ್ ಅವರು, ಶ್ರೇಯಸ್ ಐಯರ್‌ಗೆ ಸಾಥ್ ಕೊಟ್ಟು ಪಂದ್ಯ ಮುಗಿಸಿದ್ರು. 30.3 ಓವರ್ ಆಡುವ ಮೂಲಕ ಭಾರತ ತಂಡ ಗುರಿ ಮುಟ್ಟಿದೆ. ಶ್ರೇಯಸ್ ಐಯರ್‌ 53 ರನ್ ಮತ್ತು ರಾಹುಲ್ 19 ರನ್ ಗಳಿಸಿ ಔಟಾಗದೆ ಉಳಿದರು. 3 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿದ ಭಾರತ 7 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+