Ind vs NZ: ಕೊಹ್ಲಿ, ಅಯ್ಯರ್ ಶತಕದ ಅಬ್ಬರ: ನ್ಯೂಜಿಲೆಂಡ್‌ಗೆ ಬೃಹತ್ ಸವಾಲು
ಏಕದಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳು ಮಿಂಚಿದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ಭಾರತದ ಬ್ಯಾಟಿಂಗ್ ಪಡೆ ನ್ಯೂಜಿಲೆಂಡ್‌ಗೆ ಬೃಹತ್ ಸವಾಲು ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 397 ರನ್‌ಗಳನ್ನು ಕಲೆ ಹಾಕಿದೆ. ಇದು ವಿಶ್ವಕಪ್ ಸೆಮಿಫೈನಲ್‌ನಲ್ಲಿ ತಂಡವೊಂದು ದಾಖಲಿಸಿದ ಅತಿ ಹೆಚ್ಚು ಮೊತ್ತವಾಗಿದೆ. ನಾಯಕ ರೋಹಿತ್ ಶರ್ಮಾ ಆರಂಭದಲ್ಲೇ ಅಬ್ಬರಿಸುವ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು.

ರೋಹಿತ್ ಶರ್ಮಾ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 47 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. 65 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ಸಹಿತ 79 ರನ್ ಗಳಿಸಿದ್ದಾಗ ಕಾಲಿನ ಸೆಳೆತಕ್ಕೆ ಒಳಗಾದ ಶುಭಮನ್ ಗಿಲ್ ರಿಟೈರ್ಡ್ ಹರ್ಟ್ ಆದರು, ಕೊನೆಯ ಓವರ್ ನಲ್ಲಿ ಬ್ಯಾಟಿಂಗ್‌ಗೆ ಬಂದ ಅವರು ಕೇವಲ ಒಂದು ರನ್ ಗಳಿಸಿದರು.
ಕೊಹ್ಲಿ 50ನೇ ಶತಕ, ಅಯ್ಯರ್ ಅಬ್ಬರ
ಗಿಲ್ ರಿಟೈರ್ಡ್ ಹರ್ಟ್ ಆದ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಅಯ್ಯರ್ ಅಬ್ಬರಿಸಿದರು. ವಾಂಖೆಡೆ ಅಂಗಳದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನ 50ನೇ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಗಳಿಸಿದ ಜಗತ್ತಿನ ಏಕೈಕ ಕ್ರಿಕೆಟಿಗ ಎನಿಸಿಕೊಂಡರು. 113 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 117 ರನ್ ಗಳಿಸಿ ಔಟಾದರು.
ನಂತರ ಅಯ್ಯರ್ ಕೂಡ ಅಬ್ಬರಿಸಿದರು. ಕೇವಲ 70 ಎಸೆತಗಳಲ್ಲಿ 4 ಬೌಂಡರಿ 8 ಸಿಕ್ಸರ್ ಸಹಿತ 105 ರನ್ ಗಳಿಸಿ ಔಟಾದರು. ಕೊನೆಯ ಹಂತದಲ್ಲಿ ಮಿಂಚಿದ ಕೆಎಲ್ ರಾಹುಲ್ 20 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 39 ರನ್ ಗಳಿಸಿದರು. ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 397 ರನ್ ಗಳಿಸಿತು.
2019ರ ವಿಶ್ವಕಪ್‌ನ ಸೋಲಿನ ಸೇಡು ತೀರಿಸಿಕೊಂಡು ಫೈನಲ್‌ಗೆ ತಲುಪಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿರುವ ಭಾರತ ತಂಡ ಅದಕ್ಕೆ ತಕ್ಕಂತೆ ಬೃಹತ್ ಮೊತ್ತ ಕಲೆಹಾಕಿದೆ. ಈಗ ಬೌಲಿಂಗ್ ಪಡೆ ಈ ಬೃಹತ್ ಕಿವೀಸ್ ಪಡೆಯನ್ನು ಕಟ್ಟಿಹಾಕಿದರೆ ಫೈನಲ್ ಸ್ಥಾನ ಖಚಿತವಾಗಲಿದೆ.












Click it and Unblock the Notifications