Ind vs Afg: ಶಿವಂ ದುಬೆ, ರಿಂಕು ಸಿಂಗ್ ಅಬ್ಬರ: ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ
ಮೊಹಾಲಿಯಲ್ಲಿ ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆಯವರ ಅಜೇಯ 60 ರನ್‌ಗಳ ಸಹಾಯದಿಂದ ಭಾರತವು ಅಫ್ಘಾನಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು.
ಕೊರೆಯುವ ಚಳಿಯಲ್ಲೂ ಭಾರತ ಅಭಿಮಾನಿಗಳ ಪ್ರೋತ್ಸಾಹದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡ ಸುಲಭ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭದಲ್ಲಿ ಎಚ್ಚರಿಕೆಯಿಂದಲೇ ಆಡಿತು. ಮೊದಲ ವಿಕೆಟ್‌ಗೆ 50 ರನ್‌ಗಳನ್ನು ಕಲೆಹಾಕಿತು.
ಅಕ್ಷರ್ ಪಟೇಲ್, ದುಬೆ ಉತ್ತಮ ಬೌಲಿಂಗ್
ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಅಫ್ಘಾನಿಸ್ತಾನ ತಂಡವನ್ನು ಕಟ್ಟಿಹಾಕಿದರು. ಅಕ್ಷರ್ ಪಟೇಲ್ 4 ಓವರ್ ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಶಿವಂ ದುಬೆ 2 ಓವರ್ ಗಳಲ್ಲಿ 9 ರನ್ ನೀಡಿ ಒಂದು ವಿಕೆಟ್ ಪಡೆದುಕೊಂಡರು. ಮುಖೇಶ್ ಕುಮಾರ್ 4 ಓವರ್ ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರು.
ಮೊಹಮ್ಮದ್ ನಬಿ 27 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಹಿತ 42 ರನ್ ಗಳಿಸುವ ಮೂಲಕ ಅಫ್ಘಾನಿಸ್ತಾನ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು. ಉಳಿದಂತೆ ಗುರ್ಬಾಜ್ 23, ಇಬ್ರಾಹಿಂ ಜರ್ದಾನ್ 25, ಅಜ್ಮತುಲ್ಲಾ 29 ರನ್ ಗಳಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು.
ಶಿವಂ ದುಬೆ ಅರ್ಧಶತಕ
ಸುಲಭ ಸವಾಲನ್ನು ಬೆನ್ನತ್ತಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ರೋಹಿತ್ ಯಾವುದೇ ರನ್ ಗಳಿಸದೆ ರನೌಟ್ ಆದರು. ಶುಭಮನ್ ಗಿಲ್ 12 ಎಸೆತಗಳಲ್ಲಿ 23 ರನ್ ಗಳಿಸಿದರೆ, ತಿಲಕ್ ವರ್ಮಾ 26 ರನ್ ಗಳಿಸಿದರು.
ಶಿವಂ ದುಬೆ 40 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 60 ರನ್ ಗಳಿಸುವ ಮೂಲಕ ಭಾರತಕ್ಕೆ 15 ಎಸೆತಗಳು ಬಾಕಿ ಇರುವಂತೆಯೇ ಸುಲಭ ಗೆಲುವು ತಂದುಕೊಟ್ಟರು. ಜಿತೇಶ್ ಶರ್ಮಾ 20 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ ಗಳಿಸಿದರು. ರಿಂಕು ಸಿಂಗ್ 9 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿ ಪಂದ್ಯವನ್ನು ಮುಗಿಸಿದರು.












Click it and Unblock the Notifications