Heinrich Klaasen: ಮ್ಯಾಕ್ಸ್‌ವೆಲ್ ಬಳಿಕ ಮತ್ತೊಂದು ಬಿಗ್ ವಿಕೆಟ್ ಗಾನ್; ಹೆನ್ರಿಚ್ ಕ್ಲಾಸೆನ್ ಕ್ರಿಕೆಟ್‌ಗೆ ನಿವೃತ್ತಿ
Heinrich Klaasen: ದಕ್ಷಿಣ ಆಫ್ರಿಕಾದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರು ಸೋಮವಾರ (ಜೂನ್ 2) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದು ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೀಡು ಮಾಡಿದೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾರಟ್ ಗ್ಲೇನ್ ಮ್ಯಾಕ್ಸ್‌ವೆಲ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಹೆನ್ರಿಚ್ ಕ್ಲಾಸೆನ್ ಕೂಡ ಇದೇ ನಿರ್ಧಾರ ತೆಗೆದುಕೊಂಡಿರುವುದು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಐಪಿಎಲ್ 2025 ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದ ಕ್ಲಾಸೆನ್ ಅವರು ಇನ್‌ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. 'ಇದು ನನಗೆ ದುಃಖದ ದಿನ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನನಗೂ ಹಾಗೂ ನನ್ನ ಕುಟುಂಬಕ್ಕೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ತುಂಬಾ ಸಮಯ ಹಿಡಿಯಿತು. ಇದು ನಿಜಕ್ಕೂ ತುಂಬಾ ಕಷ್ಟದ ನಿರ್ಧಾರವಾಗಿತ್ತು, ಆದರೆ ಈಗ ನನಗೆ ಸಂಪೂರ್ಣ ಶಾಂತಿ ದೊರೆತಂತಾಗಿದೆ', ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಕ್ಲಾಸೆನ್ ಈ ನಿರ್ಧಾರ ತರೆದುಕೊಂಡಿದ್ದಾರೆ. 'ಮೊದಲ ದಿನದಿಂದಲೂ ನನ್ನ ದೇಶವನ್ನು ಪ್ರತಿನಿಧಿಸುವುದು ನನಗೆ ಅತ್ಯಂತ ದೊಡ್ಡ ಗೌರವವಾಗಿತ್ತು. ನಾನು ಬಾಲ್ಯದಲ್ಲಿ ಕನಸು ಕಂಡದ್ದು ಹಾಗೂ ಸಾಧಿಸಲು ಶ್ರಮಿಸಿದದ್ದೆಲ್ಲವೂ ಈ ಗೌರವದಲ್ಲಿ ಸೇರಿದೆ' ಎಂದು 33 ವರ್ಷದ ಕ್ಲಾಸೆನ್ ಹೇಳಿದ್ದಾರೆ.
ಹಾರ್ಡ್-ಹಿಟ್ಟರ್, ವಿಕೆಟ್ ಕೀಪರ್ ಹಾಗೂ ಬ್ಯಾಟ್ಸರ್ ಆಗಿರುವ ಕ್ಲಾಸೆನ್ ಅವರು ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದರು. ಇವರು ಮೂರು ಫಾರ್ಮ್ಯಾಟ್‌ಗಳ ಒಟ್ಟು 102 ಪಂದ್ಯಗಳಲ್ಲಿ (4 ಟೆಸ್ಟ್, 60 ಏಕದಿನ, 58 ಟಿ-20) ಆಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ. 2018ರಲ್ಲಿ ಡೆಬ್ಯೂ ಮಾಡಿದ ನಂತರ ಒಟ್ಟು 3,145 ರನ್ ಗಳಿಸಿದ್ದಾರೆ.
'ನಾನು ಜೀವನಪೂರ್ತಿ ಇರುವಂತಹ ಸ್ನೇಹ ಮತ್ತು ಸಂಬಂಧಗಳನ್ನು ಕ್ರಿಕೆಟ್‌ನಿಂದ ಹೊಂದಿದ್ದೇನೆ. ಜೀವನವನ್ನು ಬದಲಾಯಿಸಿದ ಅನೇಕ ಮಹಾನ್ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ಕ್ರಿಕೆಟ್‌ನಿಂದ ಸಿಕ್ಕಿತು. ಎಲ್ಲರಿಗೂ ನಾನು ಅನಂತ ಧನ್ಯವಾದಗಳನ್ನು ಹೇಳುತ್ತೇನೆ. ನನ್ನ ಕ್ರಿಕೆಟ್ ಜೀವನದಲ್ಲಿ ಕೆಲವು ಕೋಚ್‌ಗಳು ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ' ಎಂದು ಹೇಳಿದ್ದಾರೆ.
'ಪ್ರೋಟಿಯಾಸ್ ಬ್ಯಾಡ್ಜ್ ಧರಿಸಿ ಆಡಿದ್ದು ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ಗೌರವವಾಗಿತ್ತು ಮತ್ತು ಸದಾ ಇರಲಿದೆ. ಈ ನಿರ್ಧಾರದಿಂದ ನಾನು ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿದೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, 'ನಾನು ಸದಾ ದೊಡ್ಡ ಪ್ರೋಟಿಯಾಸ್ ಅಭಿಮಾನಿಯಾಗಿರುತ್ತೇನೆ. ನನ್ನ ತಂಡದ ಗೆಳೆಯರೂ ಸೇರಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ' ಎಂದು ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.












Click it and Unblock the Notifications