RCB vs LSG: ಆರ್‌ಸಿಬಿ ತಂಡದಲ್ಲಿ ಮೂರು ಬದಲಾವಣೆ ಸಾಧ್ಯತೆ; ಕಣಕ್ಕಿಳಿಯಲಿರುವ ಕನ್ನಡಿಗ!
ಐಪಿಎಲ್ 2025ರ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪ್ಲೇಆಫ್‌ಗೆ ಅರ್ಹತೆ ಪಡೆಯುವ ಹೊಸ್ತಿಲಲ್ಲಿದೆ. ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್ ಸಿಬಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 16 ಅಂಕ ಪಡೆದರೂ ಇನ್ನೂ ಪ್ಲೇಆಫ್ ಸ್ಥಾನ ಖಚಿತವಾಗಿಲ್ಲ, ಆದರೆ ಶುಕ್ರವಾರ ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದರೆ ಪ್ಲೇಆಫ್ ಸ್ಥಾನ ಖಚಿತವಾಗಲಿದೆ.
ಶುಕ್ರವಾರ ಲಕ್ನೋದಲ್ಲಿ ಆರ್ ಸಿಬಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ಪ್ಲೇಆಫ್ ರೇಸ್‌ನಲ್ಲಿದೆ ಆದರೆ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಮುಂದಿನ ಮೂರೂ ಪಂದ್ಯಗಳಲ್ಲಿ ಗೆದ್ದರೂ ಬೇರೆ ತಂಡಗಳ ಫಲಿತಾಂಶ, ರನ್‌ರೇಟ್ ಎಲ್ಲಾ ಲೆಕ್ಕಾಚಾರ ಅವರ ದಾರಿಗೆ ಹೋದರೆ ಮಾತ್ರ ಒಂದು ಅವಕಾಶ ಇರಲಿದೆ.

ಆರ್ ಸಿಬಿ ಭರ್ಜರಿ ಫಾರ್ಮ್‌ನಲ್ಲಿದ್ದು ಲಕ್ನೋ ಸೂಪರ್ ಜೈಂಟ್ಸ್ ಇನ್ನೂ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದು ಪ್ಲೇಆಫ್ ದಾರಿ ಕಠಿಣವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಫಾರ್ಮ್‌ನಲ್ಲಿ ಗೆಲುವಿನ ಅಭಿಯಾನ ಮುಂದುವರೆಸುವ ವಿಶ್ವಾಸದಲ್ಲಿದೆ. ಈಗಾಗಲೇ ತವರಿನ ಹೊರಗೆ ಆಡಿರುವ ಆರೂ ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ ಇನ್ನು ಎಲ್‌ಎಸ್‌ಜಿ ವಿರುದ್ಧ ಗೆದ್ದರೆ ಒಂದೇ ಆವೃತ್ತಿಯಲ್ಲಿ ತವರಿನ ಹೊರಗೆ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ.
ಆರ್ ಸಿಬಿ ತಂಡದಲ್ಲಿ ಮೂರು ಬದಲಾವಣೆ?
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಆರ್ ಸಿಬಿ ತಂಡದ ಪ್ರಮುಖ ಬ್ಯಾಟರ್ ದೇವದತ್ ಪಡಿಕ್ಕಲ್ ಗಾಯದ ಕಾರಣ ಐಪಿಎಲ್‌ನಿಂದಲೇ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ದೇವದತ್ ಪಡಿಕ್ಕಲ್ ಬದಲಾಗಿ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಆರ್ ಸಿಬಿ ತಂಡದಲ್ಲಿ ಅವಕಾಶ ಪಡೆದಿದ್ದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಥವಾ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಸ್ವಸ್ತಿಕ್ ಚಿಕಾರ ಕೂಡ ಆಡಬಹುದು.
ಜ್ವರದ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಿಎಸ್‌ಕೆ ವಿರುದ್ಧ ಕಣಕ್ಕಿಳಿಯದ ಫಿಲ್ ಸಾಲ್ಟ್ ಫಿಟ್ ಆಗಿದ್ದು ಎಲ್‌ಎಸ್‌ಜಿ ವಿರುದ್ಧ ಆಡುವ ಸಾಧ್ಯತೆ ಇದೆ. ಭುಜದ ನೋವಿನಿಂದಾಗಿ ಸಿಎಸ್‌ಕೆ ವಿರುದ್ಧ ಕಣಕ್ಕಿಳಿಯದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಬಹುತೇಕ ಫಿಟ್ ಆಗಿದ್ದು ಅವರೂ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಕೊಳ್ಳಬಹುದು.
ಆದರೆ ಜೋಶ್ ಹೇಜಲ್‌ವುಡ್ ಪ್ಲೇಆಫ್‌ನಲ್ಲಿ ತಂಡಕ್ಕೆ ಅತ್ಯಗತ್ಯವಾಗಿದ್ದು ಅವರ ವಿಚಾರದಲ್ಲಿ ಫ್ರಾಂಚೈಸಿ ಅವಸರ ಮಾಡುವ ಸಾಧ್ಯತೆ ಕಡಿಮೆ ಇದೆ. ಸಿಎಸ್‌ಕೆ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದ ಲುಂಗಿ ಎಂಗಿಡಿ ಮತ್ತೆ ಅವಕಾಶ ಪಡೆದರೂ ಅಚ್ಚರಿ ಪಡಬೇಕಿಲ್ಲ.
ಆರ್ ಸಿಬಿ ಸಂಭಾವ್ಯ ಆಡುವ ಬಳಗ
ಫಿಲ್ ಸಾಲ್ಟ್ / ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್ / ಸ್ವಸ್ತಿಕ್ ಚಿಕಾರ, ರಜತ್ ಪಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ / ಲುಂಗಿ ಎಂಗಿಡಿ, ಯಶ್ ದಯಾಳ್. ಇಂಪ್ಯಾಕ್ಟ್ ಪ್ಲೇಯರ್; ಸುಯಶ್ ಶರ್ಮಾ.












Click it and Unblock the Notifications