T20 World Cup: ಯಾವ ಮಾನದಂಡದ ಮೇಲೆ ಹಾರ್ದಿಕ್‌ಗೆ ಸ್ಥಾನ? ರಾಹುಲ್‌ಗೆ ಏಕಿಲ್ಲ ಅವಕಾಶ
ಜಸ್ಟ್ ಒಂದೇ ವರ್ಲ್ಡ್ ಕಪ್ ಅಷ್ಟೇ.. ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಚೇಂಜ್ ಆಗುವುದು ಅಲ್ದೆ. ಟೀಮ್ ಇಂಡಿಯಾದ ಉಪನಾಯಕ ಸ್ಥಾನವೂ ಚೇಂಜ್ ಆಗಿದೆ. ಅಂದು ಭಾರತ ತಂಡದ ಉಪನಾಯಕನಾಗಿದ್ದ ಕೆಎಲ್ ರಾಹುಲ್ ಇಂದು ಆ ಸ್ಥಾನವನ್ನು ಉಳಿಸಿಕೊಳ್ಳುವುದು ಬಿಡಿ, ತಂಡದಲ್ಲೂ ಸ್ಥಾನ ಪಡೆದಿಲ್ಲ. ಕೆಎಲ್ ರಾಹುಲ್ ಬದಲಿಗೆ ಹಾರ್ದಿಕ್ ಪಾಂಡ್ಯ ತಂಡದ ಉಪನಾಯಕ ಸ್ಥಾನವನ್ನು ಅಲಂಕರಿಸಿದ್ದಾರೆ.
ರಾಹುಲ್ ಅವರ ನಿಧಾನಗತಿಯ ಬ್ಯಾಟಿಂಗ್ ಅವರ ದಾರಿಗೆ ಮುಳುವಾಗಿದೆ ಎಂದು ನಂಬಲಾಗಿದೆ. ಈ ಮಧ್ಯೆ, ಹಾರ್ದಿಕ್ ಪಾಂಡ್ಯ ಅವರ ಆಟವೂ ಹೇಳಿಕೊಳ್ಳುವಂತಹದ್ದಿಲ್ಲ. ಅವರ ಸಹ ಸ್ಥಿರವಾಗಿ ಆಡುವಲ್ಲಿ ಎಡವುತ್ತಿದ್ದಾರೆ. ಆದರೂ ಸಹ ಅವರನ್ನು ತಂಡದಲ್ಲಿ ಸ್ಥಾನ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಪ್ರಸ್ತುತ ಐಪಿಎಲ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ತಮ್ಮ ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಂಡುಕೊಂಡಿಲ್ಲ. ಅಲ್ಲದೆ ತಂಡದ ಪ್ರದರ್ಶನವೂ ಸ್ಥಿರವಾಗಿಲ್ಲ. ಆರಂಭಿಕ ಪಂದ್ಯಗಳಲ್ಲಿ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿದ್ದ ಪಾಂಡ್ಯ, ಕೈ ಸುಟ್ಟುಕೊಂಡಿದ್ದರು. ವಿಕೆಟ್ ಪಡೆಯುವದು ದೂರದ ಮಾತು, ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 197 ರನ್ ಮಾತ್ರ ಮಾಡಿದ್ದಾರೆ. ಅವರ ಸರಾಸರಿ 24.63 ಮತ್ತು ಸ್ಟ್ರೈಕ್ ರೇಟ್ 151.53 ಆಗಿದೆ.
ಈಗ ಕೆಎಲ್ ರಾಹುಲ್ ಅವರ ಅಂಕಿಅಂಶಗಳನ್ನು ನೋಡಿದಾಗ 9 ಪಂದ್ಯಗಳನ್ನು ಆಡಿದ್ದು, 378 ರನ್ ಗಳಿಸಿದ್ದಾರೆ. ಅವರ ಸರಾಸರಿ 42.00 ಆಗಿದ್ದು, 144.27 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಇಲ್ಲಿಯವರೆಗೆ ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಂದರೆ ಸ್ಟ್ರೈಕ್ ರೇಟ್ ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲಿ ಕೆಎಲ್ ರಾಹುಲ್ ಹಾರ್ದಿಕ್ ಗಿಂತ ಉತ್ತಮವಾಗಿದ್ದಾರೆ. ಇದಾದ ಬಳಿಕವೂ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟು ಹಾರ್ದಿಕ್ ಗೆ ಅವಕಾಶ ನೀಡಲಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ.
ನಾಯಕತ್ವದ ಅಂಶಗಳು ಹೇಗಿವೆ?
ಈಗ ನಾಯಕತ್ವವನ್ನು ನೋಡುವುದಾದರೆ, ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ತಮ್ಮ ತಮ್ಮ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. LSG ತಂಡ ಇದುವರೆಗೆ ಆಡಿದ 9 ಪಂದ್ಯಗಳಲ್ಲಿ ಈ ಪೈಕಿ 5ರಲ್ಲಿ ಗೆದ್ದಿದ್ದು, 4ರಲ್ಲಿ ಸೋಲು ಕಂಡಿದೆ. ಅವರ ತಂಡ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಅಲ್ಲದೆ ಈ ಬಾರಿ ಪ್ಲೇ ಆಫ್ ಪ್ರವೇಶಿಸುವ ಕನಸಿನಲ್ಲಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ 9 ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಮಾತ್ರ ಗೆದ್ದು 6ರಲ್ಲಿ ಸೋತಿದೆ. ಸದ್ಯ ತಂಡ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಮುಂಬೈ ಕೂಡ ಪ್ಲೇಆಫ್ ತಲುಪಬಹುದು, ಆದರೆ ಮುಂದಿನ ಹಾದಿ ಅವರಿಗೆ ಸುಲಭವಲ್ಲ. ಬಿಸಿಸಿಐ ಆಯ್ಕೆ ಸಮಿತಿ ಏನೇ ಮಾಡಿದರೂ ಅದನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ.












Click it and Unblock the Notifications