DC vs GT: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಗುಜರಾತ್ ಟೈಟಾನ್ಸ್; ಪ್ಲೇ ಆಫ್ ತಲುಪಿದ ಮೂರು ತಂಡಗಳು
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಅಮೋಘ ಗೆಲುವು ಸಾಧಿಸಿದೆ. ಗುಜರಾತ್ ಟೈಟಾನ್ಸ್ ಗೆಲುವಿನ ಮೂಲಕ ಒಂದೇ ಬಾರಿಗೆ ಮೂರು ತಂಡಗಳು ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. 200 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 19 ಓವರ್ ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 205 ರನ್ ಗಳಿಸುವ ಮೂಲಕ 10 ವಿಕೆಟ್‌ಗಳ ಭಾರಿ ಗೆಲುವು ಸಾಧಿಸಿ, ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿತು.
ಗುಜರಾತ್ ಜೈಂಟ್ಸ್ ಗೆಲುವಿನೊಂದಿಗೆ ಆರ್ ಸಿಬಿ, ಪಂಜಾಬ್ ಕಿಂಗ್ಸ್ ಕೂಡ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಉಳಿದ ಒಂದು ಸ್ಥಾನಕ್ಕಾಗಿ ಇದೀಗ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪೈಪೋಟಿ ನಡೆಸಲಿವೆ. ಆದರೆ ಅಗ್ರ 2 ಸ್ಥಾನಗಳಿಗೆ ಇದೀಗ ಗುಜರಾತ್ ಟೈಟಾನ್ಸ್, ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಪೈಪೋಟಿ ನಡೆಸಲಿವೆ.

ಮಿಂಚಿದ ಸಾಯಿ ಸುದರ್ಶನ್, ಕೆಎಲ್ ರಾಹುಲ್ ಶತಕ ವ್ಯರ್ಥ
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 65 ಎಸೆತಗಳಲ್ಲಿ 14 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 112 ರನ್ ಗಳಿಸಿದರು. ಅಭಿಷೇಕ್ ಪೊರೆಲ್ 30 ರನ್ ಗಳಿಸಿದರೆ, ಅಕ್ಷರ್ ಪಟೇಲ್ 25 ರನ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್ 10 ಎಸೆತಗಳಲ್ಲಿ 21 ರನ್ ಗಳಿಸಿದರು.
200 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಯಾವ ಹಂತದಲ್ಲೂ ಒತ್ತಡಕ್ಕೆ ಒಳಗಾಗಲೇ ಇಲ್ಲ. ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಜೋಡಿ ಸಮಾಧಾನದಿಂದಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಾವ ತಂತ್ರ ಕೂಡ ಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲೇ ಇಲ್ಲ.
ಇಬ್ಬರೂ ತಮ್ಮ ಅದ್ಬುತ ಫಾರ್ಮ್ ಮುಂದುವರೆಸಿದರು. ಸಾಯಿ ಸುದರ್ಶನ್ 61 ಎಸೆತಗಳಲ್ಲಿ 12 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 108 ರನ್ ಗಳಿಸುವ ಮೂಲಕ ಶತಕ ಪೂರೈಸಿದರು. ಮತ್ತೊಂದು ಕಡೆ ಶುಭಮನ್ ಗಿಲ್ 53 ಎಸೆತಗಳಲ್ಲಿ 3 ಬೌಂಡರಿ 7 ಸಿಕ್ಸರ್ ಸಹಿತ ಅಜೇಯ 93 ರನ್ ಗಳಿಸಿ ಮಿಂಚಿದರು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ತಂಡವೊಂದು 200 ರನ್ ಚೇಸ್ ಮಾಡಿದ ಸಾಧನೆ ಮಾಡಿದೆ.












Click it and Unblock the Notifications