Gujarat Titans: ಗುಜರಾತ್ ಟೈಟಾನ್ಸ್ ತಂಡಕ್ಕೆ ಎಂಟ್ರಿ ಕೊಟ್ಟ ಕನ್ನಡಿಗ
ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದ ನಂತರ, ಗುಜರಾತ್ ಟೈಟಾನ್ಸ್ ತಂಡಕ್ಕೆ ಈ ಬಾರಿ ಹಲವು ಆಟಗಾರರು ಅಲಭ್ಯರಾಗಿದ್ದು ಹೊಸ ತಲೆನೋವು ಶುರುವಾಗಿದೆ. ಹಲವು ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಈ ಬಾರಿ ಐಪಿಎಲ್ ಪಂದ್ಯಾವಳಿಗೆ ಅಲಭ್ಯರಾಗಿದ್ದಾರೆ.
ಐಪಿಎಲ್ ಆರಂಭದ ದಿನವೇ ಗುಜರಾತ್ ಟೈಟಾನ್ಸ್ ತಂಡದಿಂದ ಮತ್ತೊಬ್ಬ ಯುವ ಆಟಗಾರ ಹೊರಗುಳಿದಿದ್ದಾರೆ. ಗಾಯಗೊಂಡಿರುವ ಯುವ ಬ್ಯಾಟರ್ ರಾಬಿನ್ ಮಿಂಜ್ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ಕನ್ನಡಿಗ ಬಿಆರ್ ಶರತ್ ತಂಡವನ್ನು ಸೇರಿಕೊಂಡಿದ್ದಾರೆ.

ಹಲವು ಪ್ರಮುಖ ಆಟಗಾರರ ಅನುಪಸ್ಥಿತಿಯನ್ನು ತುಂಬಲು ಗುಜರಾತ್ ಟೈಟಾನ್ಸ್ ಹಲವು ಹೊಸ ಪ್ರತಿಭೆಗಳನ್ನು ಹುಡುಕಿದೆ. ಯುವ ಆಟಗಾರರಿಗೆ ಮಣೆ ಹಾಕಿದೆ. ಶುಭಮನ್ ಗಿಲ್ ನಾಯಕತ್ವ ವಹಿಸಿಕೊಂಡಿದ್ದು, ಅನುಭವಿಗಳ ಜೊತೆ ಯುವ ಆಟಗಾರರ ಪಡೆಯನ್ನು ಮುಂದುವರೆಸಲಿದ್ದಾರೆ.
ಕನ್ನಡಿಗ ಬಿಆರ್ ಶರತ್
ಕರ್ನಾಟಕದ ಪ್ರತಿಭಾನ್ವಿತ ವಿಕೆಟ್‌ಕೀಪರ್-ಬ್ಯಾಟರ್ ಬಿ ಆರ್ ಶರತ್ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ಮಿಂಜ್ ಅವರ ಬದಲಾಗಿ ಸೇರಿಕೊಂಡಿದೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯೊಂದಿಗೆ, ಶರತ್ ಗುಜರಾತ್ ಟೈಟಾನ್ಸ್ ತಂಡದ ಬಲವನ್ನು ಹೆಚ್ಚಿಸಿದ್ದಾರೆ.
28 ಟಿ20 ಪಂದ್ಯಗಳು, 20 ಪ್ರಥಮ ದರ್ಜೆ ಪಂದ್ಯಗಳು ಮತ್ತು 43 ಲಿಸ್ಟ್ ಎ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಶರತ್ ಐಪಿಎಲ್ ಪಂದ್ಯಾವಳಿಯಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಅವರು ಮೂಲ ಬೆಲೆ ₹20 ಲಕ್ಷಕ್ಕೆ ಟೈಟಾನ್ಸ್ ತಂಡಕ್ಕೆ ಸೇರಿದ್ದಾರೆ.
ಗಾಯಗೊಂಡ ರಾಬಿನ್ ಮಿಂಜ್
ರಾಂಚಿಯಲ್ಲಿ ಈ ತಿಂಗಳ ಆರಂಭದಲ್ಲಿ ಸಣ್ಣ ಬೈಕ್ ಅಪಘಾತಕ್ಕೆ ಒಳಗಾದ ರಾಬಿನ್ ಮಿಂಜ್, ಪರಿಣಾಮದ ಗಾಯಗಳಿಂದಾಗಿ ಐಪಿಎಲ್‌ನಿಂದ ಹಿಂದೆ ಸರಿಯಬೇಕಾಯಿತು. ಆದರೂ ಮಿಂಜ್ ಚೇತರಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಹರಾಜಿನಲ್ಲಿ ₹3.60 ಕೋಟಿಗೆ ಗುಜರಾತ್ ಟೈಟಾನ್ಸ್ ತಂಡದ ಪಾಲಾಗುವ ಮೂಲಕ ಗಮನ ಸೆಳೆದರು.
ಪ್ರಮುಖ ಆಟಗಾರರ ಅಲಭ್ಯ
ಮಿಂಜ್ ಹೊರತಾಗಿ, ಗುಜರಾತ್ ಟೈಟಾನ್ಸ್ ಇತ್ತೀಚೆಗೆ ಹಿಮ್ಮಡಿ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ಸೇವೆಯನ್ನು ಸಹ ಕಳೆದುಕೊಳ್ಳಲಿದೆ. ಶಮಿ ಅನುಪಸ್ಥಿತಿಯನ್ನು ತಂಡವನ್ನು ಕಾಡಲಿದೆ. ಆದರೆ ಶರತ್ ಸೇರ್ಪಡೆಯಾಗಿದ್ದು ತಂಡದ ಬ್ಯಾಟಿಂಗ್ ಬಲ ಹೆಚ್ಚಿದೆ.












Click it and Unblock the Notifications