GT Vs PBKS: ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್
ಗುಜರಾತ್ ಟೈಟಾನ್ಸ್ ತಂಡಕ್ಕೆ ಅವರ ತವರಿನ ಅಂಗಳದಲ್ಲೇ ಪಂಜಾಬ್ ಕಿಂಗ್ಸ್ ಸೋಲಿನ ರುಚಿ ತೋರಿಸಿದೆ. ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು.

ನಾಯಕನ ಆಟವಾಡಿದ ಶುಭಮನ್ ಗಿಲ್ 48 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 89 ರನ್ ಗಳಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು. ಡೇವಿಡ್ ಮಿಲ್ಲರ್ ಗಾಯಗೊಂಡ ಕಾರಣ ತಂಡದಲ್ಲಿ ಅವಕಾಶ ಪಡೆದ ಕೇನ್ ವಿಲಿಯಮ್ಸನ್ 22 ಎಸೆತಗಳಲ್ಲಿ 26 ರನ್ ಗಳಿಸಿ ನಾಯಕನಿಗೆ ಜೊತೆಯಾಟ ನೀಡಿದರು.
ಸಾಯಿ ಸುದರ್ಶನ್ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 33 ರನ್ ಗಳಿಸಿದರು. ವಿಜಯ್ ಶಂಕರ್ 10 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರೆ, ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿದರು.
ಶಶಾಂಕ್ ಸಿಂಗ್, ಆಶುತೋಶ್ ಶರ್ಮಾ ಅಬ್ಬರ
200 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಔಟಾದರೆ, ಜಾನಿ ಬೈರ್ ಸ್ಟೋ 13 ಎಸೆತಗಳಲ್ಲಿ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಪ್ರಭ್‌ಸಿಮ್ರನ್ ಸಿಂಗ್ 35 ರನ್ ಗಳಿಸಿದರೆ, ಸ್ಯಾಮ್ ಕರನ್ 8 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರು. ಸಿಕಂದರ್ ರಝಾ 16 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. 150 ರನ್ ಗಳಿಸುವಷ್ಟರಲ್ಲಿ 6 ಪ್ರಮುಖ ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ ಸೋಲಿನ ಸುಳಿಗೆ ಸಿಲುಕಿತ್ತು.
ಆದರೆ, ಈ ಸಂದರ್ಭದಲ್ಲಿ ಮೈದಾನಕ್ಕಿಳಿದ ಶಶಾಂಕ್ ಸಿಂಗ್ ಅಬ್ಬರಿಸಿದರು, 29 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 61 ರನ್ ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಜಿತೇಶ್ ಶರ್ಮಾ 8 ಎಸೆತಗಳಲ್ಲಿ 16 ರನ್ ಗಳಿಸಿದರೆ, ಆಶುತೋಶ್ ಶರ್ಮಾ 17 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ಸಹಿತ 31 ರನ್ ಗಳಿಸಿ ಶಶಾಂಕ್ ಸಿಂಗ್ ಅವರಿಗೆ ಸಹಾಯ ಮಾಡಿದರು.
ಆಡಿರುವ ನಾಲ್ಕು ಪಂದ್ಯಗಳಲ್ಲಿ ಪಂಜಾಬ್ ಎರಡನೇ ಗೆಲುವನ್ನು ದಾಖಲಿಸಿತು. ಗುಜರಾತ್ ಟೈಟಾನ್ಸ್ ಈ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಬಾರಿಗೆ ಸೋಲನುಭವಿಸಿತು.












Click it and Unblock the Notifications