ಸರ್ಕಾರಿ ನೌಕರರ ಕ್ರೀಡಾಕೂಟ; ರಜೆ, ಪ್ರವಾಸ ಭತ್ಯೆ ವಿವರ
ಬೆಂಗಳೂರು, ಅಕ್ಟೋಬರ್ 26: ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ 2023ಕ್ಕೆ ಅಕ್ಟೋಬರ್ 27ರಂದು ಚಾಲನೆ ದೊರೆಯಲಿದೆ. ತುಮಕೂರಿನಲ್ಲಿ ಮೂರು ದಿನ ಕ್ರೀಡಾಕೂಟ ನಡೆಸಲಾಗುತ್ತದೆ. ಕ್ರೀಡಾಕೂಟ ಆಯೋಜನೆ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.
2022-23ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ತುಮಕೂರಿನಲ್ಲಿ ದಿನಾಂಕ 27/10/2023 ರಿಂದ 29/10/2023ರ ವರೆಗೆ (ಮೂರು ದಿನ) ನಡೆಸಲಾಗುತ್ತದೆ.

2022-23 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು/ ತಂಡಗಳನ್ನು ಕಳುಹಿಸುವ ಕುರಿತು. ಮಾನ್ಯ ಆಯುಕ್ತರು, ಯುಸಕ್ರೀಇ, ಬೆಂಗಳೂರು ಇವರ ಸುತ್ತೋಲೆ 5/10/2023 ಉಲ್ಲೇಖಿಸಿ ಸುತ್ತೋಲೆಯನ್ನು ಹೊರಡಿಸಲಾಗಿದೆ.
ರಜೆ, ಪ್ರವಾಸ ಭತ್ಯೆ ವಿವರ; ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸರ್ಕಾರಿ ಆದೇಶದ ಪ್ರಕಾರ ವಿಶೇಷ ಸಾಂದರ್ಭಿಕ ರಜೆ ಪಡೆಯಲು ಅರ್ಹರಿರುತ್ತಾರೆ. ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಯಮಾನುಸಾರ ಸಂಬಂಧಿಸಿದ ಮಾತೃ ಇಲಾಖೆಯಿಂದ ಪ್ರವಾಸ ಭತ್ಯೆ ಪಡೆಯಲು ಅರ್ಹರಿರುತ್ತಾರೆ.
ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಗಳಲ್ಲಿ (ರಿಲೇ ಸಹಿತ) ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಈಗಾಗಲೇ ಆನ್‌ಲೈನ್‌ನಲ್ಲಿ ನೋಂದಣಿಯಾಗಿರುವ ನೌಕರರು ನೇರವಾಗಿ ತಮ್ಮ ಯಾವುದಾದರೂ ಐಡಿ ಕಾರ್ಡ್‌ನೊಂದಿಗೆ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು. ಅಲ್ಲಿ ನೋಂದಣಿ ಮಾಡಿಕೊಂಡ ನಂತರ ಐಡಿ ಕಾರ್ಡ್‌ನ್ನು ಪಡೆಯಬಹುದಾಗಿದೆ.
ದಿನಾಂಕ 27/10/2023ರಂದು ಮಧ್ಯಾಹ್ನ 1 ಗಂಟೆಯೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ, ತುಮಕೂರು ಇವರಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಕ್ರೀಡಾಕೂಟಕ್ಕೆ ನಿಯಮಾವಳಿಗಳು
* ಸದರಿ ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಖಾಯಂ ನೌಕರರು ಭಾಗವಹಿಸಲು ಅರ್ಹರಾಗಿರುತ್ತಾರೆ.
* ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾಕೋಟದಡಿ ನೇಮಕಗೊಂಡ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
* ಎಲ್ಲಾ ಕ್ರೀಡಾಪಟುಗಳು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡೆಯಲ್ಲಿ ಭಾಗವಹಿಸಲು ನೀಡಿರುವ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
* ಸಂಗೀತ, ನೃತ್ಯ ಮತ್ತು ಕಲಾ ಶಿಕ್ಷಕರು, ಸಂಗೀತ, ನೃತ್ಯ ಮತ್ತು ಕರಕುಶಲ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.
* ದಿನಗೂಲಿ ನೌಕರರು, ಅರಕಾಲಿಕ ನೌಕರರು, ಕ್ಷೇಮಾಭಿವೃದ್ಧಿ ನೌಕರರು, ಗುತ್ತಿಗೆ ನೌಕರರು, ನಿಗಮ/ ಮಂಡಳಿ ನೌಕಕರು ಮತ್ತು ಇತರೇ ಖಾಯಂ ಅಲ್ಲದ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
* ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಸಮವಸ್ತ್ರ ವೃಂದಕ್ಕೆ ಪ್ರತ್ಯೇಕ ಕ್ರೀಡಾಕೂಟಗಳಿರುವುದರಿಂದ ಈ ಎರಡೂ ಇಲಾಖೆಗಳ ಕಛೇರಿ ಹಾಗೂ ಲಿಪಿಕ ನೌಕರರು/ ಕಛೇರಿ ಸಿಬ್ಬಂದಿ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ.
* ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅಬಕಾರಿ, ಅರಣ್ಯ, ಅಗ್ನಿಶಾಮಕ ಇಲಾಖೆಗಳ ಕ್ರೀಡಾಕೋಟಾದಡಿ ನೇಮಕವಾದ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
* 1 ಟ್ರ್ಯಾಕ್ ಮತ್ತು 2 ಫೀಲ್ಡ್ ಅಥವಾ 2 ಟ್ರ್ಯಾಕ್ ಮತ್ತು 1 ಫೀಲ್ಡ್ ಸೇರಿ. ಒಟ್ಟು ಮೂರು ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು.
* 45 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 45 ವರ್ಷಕ್ಕೊಳಪಟ್ಟವರಿಗೆ ಇರುವ ಸ್ಪರ್ಧೆಗಳಲ್ಲಿ ಸ್ವಂತ ಜವಾಬ್ದಾರಿ ಮೇಲೆ ಭಾಗವಹಿಸಬಹುದು. 45 ವರ್ಷಕ್ಕೊಳಪಟ್ಟವರು 45 ವರ್ಷ ಮೇಲ್ಪಟ್ಟವರ ಜೊತೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
* ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ, ತಕರಾರಿಗೆ ಅವಕಾಶವಿರುವುದಿಲ್ಲ.












Click it and Unblock the Notifications