Gautam Gambhir: ಇಷ್ಟೊಂದು ಅವಸರ ಯಾಕೆ ಪುಟ್ಟ? ವೈಭವ್‌ ಸೂರ್ಯವಂಶಿಗೆ ಗೌತಮ್‌ ಗಂಭೀರ್ ಎಚ್ಚರಿಕೆ ಸಂದೇಶ

Gautam Gambhir: ಭಾರತವು ಅಪ್ಘಾನಿಸ್ತಾನ ವಿರುದ್ಧದ ಮೂರು ಟಿ20 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಭಾರತೀಯ ಕ್ರಿಕೆಟ್‌ನ ಯುವ ಹಾಗೂ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮಹತ್ವದ ಸಲಹೆ ನೀಡಿದ್ದಾರೆ. ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಮತ್ತು ತಾಳ್ಮೆಯಿಂದ ಇರುವಂತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Gautam Gambhir Warning to Vaibhav Sooryavanshi After Afghanistan T20I Series Snub in New delhi

ಪ್ಲೇಯಿಂಗ್‌ 11ನಲ್ಲಿ ಅವಕಾಶ ಮಿಸ್..

ಆಫ್ಘಾನಿಸ್ತಾನ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3-0 ಅಂತರದ ಜಯ ಸಾಧಿಸಿದ್ದು, ಈ ಸರಣಿಯಲ್ಲಿ 15 ವರ್ಷದ ಸೂರ್ಯವಂಶಿಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೋಡಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಇವರು ಭಾರತದ ಪರ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿದಿದ್ದರು.

ವೈಭವ್‌ಗೆ ಗೌತಮ್ ಗಂಭೀರ್ ಎಚ್ಚರಿಕೆ ಸಲಹೆ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಿಡಿಸಿ
ಭಾರತದ 127 ರನ್‌ಗಳ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಗೌತಮ್ ಗಂಭೀರ್ ಅವರು, 'ಅದು 15 ವರ್ಷದ ಯುವಕನಾಗಿರಲಿ ಅಥವಾ 30 ವರ್ಷದ ಹಿರಿಯ ಆಟಗಾರನಾಗಿರಲಿ, ತಂಡದಲ್ಲಿ ತಮಗೆ ಸಿಗಬೇಕಾದ ಅವಕಾಶಕ್ಕಾಗಿ ಕಾಯಲೇಬೇಕಾಗುತ್ತದೆ,' ಎಂದು ಹೇಳಿದ್ದಾರೆ.

'ಉತ್ತಮ ಪ್ರದರ್ಶನ ನೀಡುವವರಿಗೆ ಮೊದಲ ಆದ್ಯತೆ'

'ವೈಭವ್ ಸೂರ್ಯವಂಶಿ ಬಳಿ ಎಂತಹ ಅದ್ಭುತ ಪ್ರತಿಭೆಯಿದೆ ಮತ್ತು ಆತ ಏನು ಮಾಡಬಲ್ಲ ಎಂಬುದರ ಅರಿವು ನಮಗಿದೆ. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ, ಹೊಸದಾಗಿ ತಂಡಕ್ಕೆ ಸೇರ್ಪಡೆಯಾದ ಆಟಗಾರರಿಗಿಂತ ಹೆಚ್ಚಿನ ಆದ್ಯತೆ ನೀಡುವುದು ಸಹಜ,' ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, 'ಸೂರ್ಯವಂಶಿಗೆ ಒಮ್ಮೆ ಸರಣಿಯಲ್ಲಿ ಆಡುವ ಅವಕಾಶ ದೊರೆತರೆ, ಅವರಿಗೆ ಸಾಲು ಸಾಲು ಅವಕಾಶಗಳನ್ನು ನೀಡಲಾಗುತ್ತದೆ. ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ಪ್ರತಿಭಾವಂತ ಆಟಗಾರರ ಉಪಸ್ಥಿತಿಯನ್ನು ನಾವು ಬಯಸುತ್ತೇವೆ,' ಎಂದು ತಿಳಿಸಿದ್ದಾರೆ.

ವೈಭವ್ ಸೂರ್ಯವಂಶಿ ಸಾಧನೆ

ಅದ್ಭುತ ಯುವ ಪ್ರತಿಭೆ ಸೂರ್ಯವಂಶಿ ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಕಳೆದ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಅವರು ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇಂಗ್ಲೆಂಡ್‌ನಲ್ಲಿ ರನ್ ಗಳಿಸಲು ಪರದಾಡಿದರು. ಬಳಿಕ ಜಿಂಬಾಬ್ವೆ ವಿರುದ್ಧ ನಡೆದ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

ಸದ್ಯ ಆಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಹೊರಗುಳಿದಿದ್ದರೂ, ವೈಭವ್ ಸೂರ್ಯವಂಶಿ ಅವರು ಜಪಾನ್‌ನ ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕಾಗಿ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಟೀಮ್ ಇಂಡಿಯಾವು ಸೆಪ್ಟೆಂಬರ್‌ನಲ್ಲಿ ಜಪಾನ್ ವಿರುದ್ಧ ಒಂದು ಟಿ20 ಪಂದ್ಯ ಹಾಗೂ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಆಡಲಿದೆ.

ವೈಭವ್ ಸೂರ್ಯವಂಶಿ ಅವರನ್ನು ಅಪ್ಘಾನ್ ವಿರುದ್ಧದ ಸರಣಿಯಲ್ಲಿ ಯಾಕೆ ಆಡಿಸಲಿಲ್ಲ ಎನ್ನುವ ಆಕ್ರೋಶಗಳು ವ್ಯಕ್ತವಾಗಿದ್ದವು. ಸರಣಿ ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಗೌತಮ್ ಗಂಭೀರ್ ಅವರು, ಅವರಿಗೆ ಇನ್ನೂ ತುಂಬಾ ಅವಕಾಶಗಳಿವೆ. ನಾವು ಮೊದಲು ತಂಡಕ್ಕಾಗಿ ಶ್ರಮಿಸಿದ ಹಿರಿಯರಿಗೆ ಆದ್ಯತೆ ನೀಡಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಅವರನ್ನು ಕೈಬಿಟ್ಟಿಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+