Virat And Rohit: ಕೊಹ್ಲಿ-ರೋಹಿತ್ ಮೇಲೆ ಸಿಟ್ಟಾದ ಅಭಿಮಾನಿಗಳು
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ದಿನವೇ ನ್ಯೂಜಿಲೆಂಡ್ ತಂಡವನ್ನು 215 ರನ್‌ಗಳಿಗೆ ಆಲೌಟ್ ಮಾಡಿದ್ದ ಭಾರತ ಮೇಲುಗೈ ಸಾಧಿಸಿತ್ತು, ಆದರೆ ದಿನದಾಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 84 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದೆ. ಭಾರತಕ್ಕೆ ಮತ್ತೆ ಬ್ಯಾಟರ್ ಗಳು ಕೈಕೊಟ್ಟಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ಈ ಇಬ್ಬರು ಹಿರಿಯ ಆಟಗಾರರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸುವುದು ಇವರ ಉದ್ದೇಶವಾಗಿತ್ತು. ಆದರೆ ಟಿ20 ವಿಶ್ವಕಪ್ ಬಳಿಕ ಇಬ್ಬರಿಂದ ಉತ್ತಮ ಪ್ರದರ್ಶನ ಬಂದಿಲ್ಲ. ಬಾಂಗ್ಲಾದೇಶದ ವಿರುದ್ದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದ್ದರೂ, ಇವರಿಬ್ಬರಿಂದ ಹೆಚ್ಚಿನ ಕೊಡುಗೆ ಇರಲಿಲ್ಲ.

ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಾದರೂ ಇಬ್ಬರು ಫಾರ್ಮ್‌ಗೆ ಮರಳಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಇಬ್ಬರು ಪದೇ ಪದೇ ವಿಫಲವಾಗುತ್ತಿದ್ದು ಭಾರತದ ಉಳಿದ ಬ್ಯಾಟರ್ ಗಳ ಮೇಲೆ ಒತ್ತಡ ಹೆಚ್ಚಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಕೂಡ ಇಬ್ಬರು ಮತ್ತೊಮ್ಮೆ ವಿಫಲವಾಗಿದ್ದಾರೆ.
ಜೀವದಾನ ಸಿಕ್ಕರೂ ಬಳಸಿಕೊಳ್ಳದ ರೋಹಿತ್
ನ್ಯೂಜಿಲೆಂಡ್ ತಂಡವನ್ನು 215 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಆರಂಭ ಪಡೆಯಿತು. ತವರಿನಲ್ಲಿ ರೋಹಿತ್ ಶರ್ಮಾ ದೊಡ್ಡ ಮೊತ್ತ ಕಲೆಹಾಕುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ರೋಹಿತ್ ಕೂಡ ಬೌಂಡರಿ ಬಾರಿಸುವ ಮೂಲಕ ಉತ್ತಮವಾಗಿ ಆರಂಭಿಸಿದರು. ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ರೂರ್ಕಿ ಕ್ಯಾಚ್ ಬಿಟ್ಟಕಾರಣ ರೋಹಿತ್‌ಗೆ ಒಂದು ಜೀವದಾನ ಕೂಡ ಸಿಕ್ಕಿತು. ಆದರೂ ರೋಹಿತ್ ಶರ್ಮಾ ಕೇವಲ 18 ರನ್ ಗಳಿಸಿ ಔಟಾದರು.
ಇನ್ನು ವಿರಾಟ್ ಕೊಹ್ಲಿ ಬೇಡದ ರನ್ ಕದಿಯಲು ಹೋಗಿ ದಿನದಾಟ ಇನ್ನೇನು ಮುಗಿಯುತ್ತದೆ ಎನ್ನುವಾಗ ಔಟಾದರು. ನ್ಯೂಜಿಲೆಂಡ್ ತಂಡದ ಫೀಲ್ಡಿಂಗ್ ಗುಣಮಟ್ಟದ ಬಗ್ಗೆ ತಿಳಿದಿದ್ದರೂ, ಒಂದು ರನ್‌ಗಾಗಿ ವಿಕೆಟ್ ಕಳೆದುಕೊಳ್ಳುವ ರಿಸ್ಕ್ ತೆಗೆದುಕೊಂಡಿದ್ದಕ್ಕೆ ಬೆಲೆ ತೆತ್ತರು. ಮ್ಯಾಟ್ ಹೆನ್ರಿ ಡೈರೆಕ್ಟ್ ಹಿಟ್ ಹೊಡೆಯುವ ಮೂಲಕ ಕೊಹ್ಲಿಯನ್ನು ರನೌಟ್ ಮಾಡಿದರು. ಆರು ರನ್ ಗಳಿಸಿದ ಕೊಹ್ಲಿ ಬೇಸರದಿಂದಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಈಗ ಇಬ್ಬರ ಪ್ರದರ್ಶನ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ನೀವಿಬ್ಬರು ಆಡಿದ್ದು ಸಾಕು ಇನ್ನು ಹೊಸಬರಿಗೆ ಅವಕಾಶ ಸಿಗಲಿ, ನೀವು ವಿಶ್ರಾಂತಿ ಪಡೆಯಿರಿ ಎಂದು ಸಲಹೆ ಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಬಳಿಕ ಭಾರತ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದು ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆಡಲಿದೆ. ಈ ಸರಣಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಮಹತ್ವದ್ದಾಗಿದ್ದು, ಇವರಿಬ್ಬರ ಕಳಪೆ ಫಾರ್ಮ್ ಆತಂಕ ಮೂಡಿಸಿದೆ.












Click it and Unblock the Notifications