IPL 2023: ಈ ಬಾರಿಯ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲೋದು ಇವರೇ!
ವಿಶ್ವದ ಶ್ರೀಮಂತ ಲೀಗ್ ಐಪಿಎಲ್ 2023ರ ಆವೃತ್ತಿ ಆರಂಭವಾಗಿ ಒಂದು ವಾರವಾಗಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಇದು ದೊಡ್ಡ ಹಬ್ಬವಾಗಿದೆ. 8 ಪಂದ್ಯಗಳು ಮುಕ್ತಾಯವಾಗುತ್ತಿದ್ದಂತೆ ಈಗಾಗಲೇ ಕಪ್ ಗೆಲ್ಲುವ ತಂಡದಿಂದ ಮೊದಲಾಗಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರು ಗೆಲ್ತಾರೆ ಎನ್ನುವ ಬಗ್ಗೆ ಕೂಡ ಸಖತ್ ಚರ್ಚೆ ನಡೆಯುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ತಜ್ಞರು ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲಬಹುದಾದ ಆಟಗಾರರ ಹೆಸರನ್ನು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದ್ದು, ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ರಾಜಸ್ಥಾನ ರಾಯಲ್ಸ್ ಸ್ಟಾರ್ ಓಪನರ್ ಜೋಸ್ ಬಟ್ಲರ್, ಯುವ ಗುಜರಾತ್ ಟೈಟಾನ್ಸ್ ಬ್ಯಾಟರ್ ಶುಭಮನ್ ಗಿಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಕೂಡ ಅವಕಾಶ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಿಗೆ ಟೂರ್ನಿಯ ಫೈನಲ್ ಪಂದ್ಯದ ನಂತರ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಇನ್ನು ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್ ಗೆ ಪರ್ಪಲ್ ಕ್ಯಾಪ್ ಗೌರವ ಸಿಗುತ್ತದೆ. ರಾಜಸ್ಥಾನ ರಾಯಲ್ಸ್ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಗುಜರಾತ್ ಟೈಟಾನ್ಸ್‌ನ ರಶೀದ್ ಖಾನ್ ಈ ಬಾರಿ ಅತಿ ಹೆಚ್ಚು ವಿಕೆಟ್ ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ-ರುತುರಾಜ್
ಈ ಬಾರಿ ಐಪಿಎಲ್‌ನಲ್ಲಿ ಎಲ್ಲಾ ತಂಡದ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್ ಅಂತಹ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಎಲ್ಲರ ಗಮನ ಇರುವುದು ರುತುರಾಜ್ ಗಾಯಕ್ವಾಡ್ ಮತ್ತು ವಿರಾಟ್ ಕೊಹ್ಲಿ ಮೇಲೆ.
ವಿರಾಟ್ ಕೊಹ್ಲಿ ಮೊದಲನೇ ಪಂದ್ಯದಲ್ಲೇ 49 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. 2 ಪಂದ್ಯಗಳಿಂದ 74.50 ಸರಾಸರಿಯಲ್ಲಿ 149 ರನ್ ಗಳಿಸಿದ್ದಾರೆ. ಅವರು ಕೂಡ ಈ ಬಾರಿಯ ಐಪಿಎಲ್‌ನಲ್ಲಿ ದೊಡ್ಡ ರನ್ ಗಳಿಸುವ ಮುನ್ಸೂಚನೆ ನೀಡಿದ್ದಾರೆ.

ಆರೆಂಜ್ ಕ್ಯಾಪ್‌ಗಾಗಿ ಅಗ್ರ ಸ್ಪರ್ಧಿಗಳಾಗಿ ಕೊಹ್ಲಿ ಮತ್ತು ಗಾಯಕ್ವಾಡ್ ಅವರನ್ನು ಮೂವರು ತಜ್ಞರು ಬೆಂಬಲಿಸಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ಯಾರೆನ್ ಗಂಗಾ, ದಕ್ಷಿಣ ಆಫ್ರಿಕಾದ ಲೆಜೆಂಡ್ ಜಾಕ್ವೆಸ್ ಕಾಲಿಸ್, ಭಾರತದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರು ಅಂತಿಮವಾಗಿ ಆರೆಂಜ್ ಕ್ಯಾಪ್ ವಿಜೇತರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಪರ್ಪಲ್ ಕ್ಯಾಪ್‌ಗೆ ಚಹಾಲ್-ರಶೀದ್ ಪೈಪೋಟಿ!
2023ರ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಪಡೆಯಲು ಲೆಜೆಂಡರಿ ಸ್ಪಿನ್ನರ್ ಗಳಾದ ಯುಜ್ವೇಂದ್ರ ಚಹಾಲ್ ಮತ್ತು ರಶೀದ್ ಖಾನ್ ಮುಂಚೂಣಿಯಲ್ಲಿದ್ದಾರೆ ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಟ್ರೆಂಟ್ ಬೌಲ್ಟ್ (ಆರ್‌ಆರ್), ಮೊಹಮ್ಮದ್ ಶಮಿ (ಜಿಟಿ), ಮಾರ್ಕ್ ವುಡ್ (ಎಲ್‌ಎಸ್‌ಜಿ) ಮತ್ತು ಕುಲದೀಪ್ ಯಾದವ್ (ಡಿಸಿ) ಕೂಡ ಪರ್ಪಲ್ ಕ್ಯಾಪ್‌ಗಾಗಿ ಪೈಪೋಟಿಯಲ್ಲಿದ್ದಾರೆ.












Click it and Unblock the Notifications