RCB: 35 ಬೌಂಡರಿ, 13 ಸಿಕ್ಸ್, 300 ರನ್; ಐಪಿಎಲ್ ಹರಾಜಿಗೂ ಮುನ್ನ ದೊಡ್ಡ ಸಂದೇಶ ಕೊಟ್ಟ ಆರ್ಸಿಬಿ ಮಾಜಿ ಆಟಗಾರ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಹರಾಜು ಸಮೀಪಿಸುತ್ತಿದೆ. ಸದ್ಯ ರಣಜಿ ಟ್ರೋಫಿ ಪಂದ್ಯಾವಳಿ ನಡೆಯುತ್ತಿದ್ದು ಅನೇಕ ದೇಶೀಯ ಆಟಗಾರರಿಗೆ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆಯಲು ಉತ್ತಮ ಅವಕಾಶ ಸಿಕ್ಕಂತಾಗಿದೆ. ಹಲವು ಯುವ ಆಟಗಾರರು ಈಗಾಗಲೇ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಮಾರ್ ಸಿಬಿ ಮಾಜಿ ಆಟಗಾರ ಅಮೋಘ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಮಹಿಪಾಲ್ ಲೊಮ್ರೋರ್, ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ರಾಜಸ್ಥಾನದ ಪರವಾಗಿ ಆಡುತ್ತಿದ್ದಾರೆ. ಡೆಹ್ರಾಡೂನ್‌ನ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯಲ್ಲಿ ಉತ್ತರಾಖಂಡ್ ವಿರುದ್ಧದ ಪಂದ್ಯದಲ್ಲಿ ತ್ರಿಶತಕ ಬಾರಿಸುವ ಮೂಲಕ ಫ್ರಾಂಚೈಸಿಗಳಿಗೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಮಹಿಪಾಲ್ ಲೋಮ್ರೋರ್ ಎಲೈಟ್ ಬಿ ರಣಜಿ ಟ್ರೋಫಿ ಪಂದ್ಯಾವಳಿಯ ಐದನೇ ಸುತ್ತಿನ ಪಂದ್ಯದಲ್ಲಿ ಮಿಂಚಿದ್ದಾರೆ. 13 ಸಿಕ್ಸರ್, 25 ಬೌಂಡರಿ ಸಿಡಿಸುವ ಮೂಲಕ 357 ಎಸೆತಗಳಲ್ಲಿ ತ್ರಿಶತಕ ಗಳಿಸಿ ಮಿಂಚಿದ್ದಾರೆ.

ರಾಜಸ್ಥಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 660 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮಹಿಪಾಲ್ ಲೋಮ್ರೋರ್ 300 ರನ್ ಅಜೇಯರಾಗಿ ಉಳಿದರು. ಕಾರ್ತಿಕ್ ಶರ್ಮಾ 113 ರನ್ ಗಳಿಸುವ ಮೂಲಕ ಗಮನ ಸೆಳೆದರು. ಮೊದಲ ಎರಡು ದಿನ ಭರ್ಜರಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ನಂತರ ರಾಜಸ್ಥಾನ ಪರ ತ್ರಿಶತಕ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಲೋಮ್ರೋರ್ ಪಾತ್ರರಾಗಿದ್ದಾರೆ.
ಉತ್ತಮ ಫಾರ್ಮ್‌ನಲ್ಲಿರುವ ಲೊಮ್ರೋರ್
ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಮಹಿಪಾಲ್ ಲೊಮ್ರೋರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಜೈಪುರದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೂಡ ಲೋಮ್ರೋರ್ ಶತಕ ಬಾರಿಸಿ ಗಮನ ಸೆಳೆದಿದ್ದರು. ಲೋಮ್ರೋರ್ ಅವರ ಸದ್ಯದ ಫಾರ್ಮ್ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಮೆಗಾ ಹರಾಜಿನಲ್ಲಿ ಲೋಮ್ರೋರ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೋಮ್ರೋರ್ ರನ್ನು ಬಿಡುಗಡೆ ಮಾಡಿದೆ. ಲೊಮ್ರೊರ್ 2022 ರಿಂದ 2024 ರವರೆಗೆ ಆರ್ ಸಿಬಿ ತಂಡಕ್ಕಾಗಿ ಆಡಿದ್ದಾರೆ. 2024ರ ಐಪಿಎಲ್‌ನಲ್ಲಿ 10 ಪಂದ್ಯಗಳಲ್ಲಿ 125 ರನ್ ಮಾತ್ರ ಗಳಿಸಿದರು. ಆದರೆ ಅವರ ಸ್ಟ್ರೈಕ್ ರೇಟ್ 183.82 ಆಗಿದ್ದು ಗಮನ ಸೆಳೆಯಿತು. ಆರ್ ಸಿಬಿಗಾಗಿ ಆಡುವ ಮೊದಲು ಲೊಮ್ರೋರ್ ರಾಜಸ್ಥಾನ್ ರಾಯಲ್ಸ್‌ಗಾಗಿ ನಾಲ್ಕು ಆವೃತ್ತಿಗಳಲ್ಲಿ ಆಡಿದರು, ಆದರೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಲೋಮ್ರೋರ್ ಅದೃಷ್ಟ ಖುಲಾಯಿಸುತ್ತಾ ಎನ್ನುವ ಕುತೂಹಲ ಮೂಡಿದೆ.












Click it and Unblock the Notifications