RCB Ellyse Perry: ಮತ್ತೊಮ್ಮೆ ಅಬ್ಬರಿಸಿದ ಎಲ್ಲಿಸ್ ಪೆರ್‍ರಿ; ಹೊಸ ದಾಖಲೆ ನಿರ್ಮಾಣ
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2025 ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟರ್ ಎಲ್ಲಿಸ್ ಪೆರ್‍ರಿ ಮತ್ತೊಮ್ಮೆ ಅಬ್ಬರಿಸಿದರು. ಯುಪಿ ವಾರಿಯರ್ಸ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಅವರು ಎರಡು ಹೊಸ ದಾಖಲೆಗಳನ್ನು ಬರೆದರು.
ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿದೆ. ಅದ್ಭುತ ಫಾರ್ಮ್ ಮುಂದುವರೆಸಿರುವ ಎಲ್ಲಿಸ್ ಪೆರ್‍ರಿ 56 ಎಸೆತಗಳಲ್ಲಿ 9 ಬೌಂಡರಿ 3 ಭರ್ಜರಿ ಸಿಕ್ಸರ್ ಸಹಿತ ಅಜೇಯ 90 ರನ್ ಗಳಿಸಿ ಮಿಂಚಿದರು.

ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದರು. ಡೆಲ್ಲಿ ಕ್ಯಾಪಿಟಲ್ಸ್‌ನ ಮೆಗ್ ಲ್ಯಾನಿಂಗ್ ಕಳೆದ ಎರಡು ಆವೃತ್ತಿಯಿಂದಲೂ ಮೊದಲ ಸ್ಥಾನದಲ್ಲಿದ್ದರೇ ಮೂರನೇ ಆವೃತ್ತಿಯಲ್ಲಿ ಅವರನ್ನು ಹಿಂದಿಕ್ಕುವಲ್ಲಿ ಎಲ್ಲಿಸ್ ಪೆರ್‍ರಿ ಯಶಸ್ವಿಯಾಗಿದ್ದಾರೆ. 22 ಪಂದ್ಯಗಳಲ್ಲಿ ಮೆಗ್ ಲ್ಯಾನಿಂಗ್ 782 ರನ್ ಗಳಿಸಿದರೆ, 21 ಎಸೆತಗಳಲ್ಲಿ ಎಲ್ಲಿಸ್ ಪೆರ್‍ರಿ 835 ರನ್ ಗಳಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಮೆಗ್ ಲ್ಯಾನಿಂಗ್ ಅವರ ಸಾಧನೆಯನ್ನು ಕೂಡ ಸರಿಗಟ್ಟಿದ್ದಾರೆ. ಮೆಗ್ ಲ್ಯಾನಿಂಗ್ 7 ಅರ್ಧಶತಕ ಗಳಿಸಿದ್ದರೆ, ಇದೀಗ ಎಲ್ಲಿಸ್ ಪೆರ್‍ರಿ ಕೂಡ 7 ಅರ್ಧಶತಕ ಗಳಿಸಿದ್ದಾರೆ. ಈ ಆವೃತ್ತಿಯಲ್ಲೂ ಅಮೋಘ ಪ್ರದರ್ಶನ ಮುಂದುವರೆಸಿರುವ ಅವರು ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಎಲ್ಲಿಸ್ ಪೆರ್‍ರಿ ಹೋರಾಟ ವ್ಯರ್ಥ
ಎಲ್ಲಿಸ್ ಪೆರ್‍ರಿ ಹೋರಾಟದ ನಡುವೆಯೂ ಯುಪಿ ವಾರಿಯರ್ಸ್ ಆರ್ ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 180 ರನ್ ಕಲೆಹಾಕಿದರೆ, ಯುಪಿ ವಾರಿಯರ್ಸ್ ಕೂಡ 20 ಓವರ್ ಗಳಲ್ಲಿ 180 ರನ್ ಕಳೆದುಕೊಂಡು ಆಲೌಟ್ ಆಯಿತು. ಸೋಫಿ ಎಕಲ್‌ಸ್ಟನ್ ಕೊನೆಯ ಓವರ್ ನಲ್ಲಿ 17 ರನ್ ಸಿಡಿಸಿ ಪಂದ್ಯವನ್ನು ಟೈ ಮಾಡಿದರು.
ಬಳಿಕ ಸೂಪರ್ ಓವರ್ ನಲ್ಲಿ ಯುಪಿ ವಾರಿಯರ್ಸ್ 8 ರನ್ ಕಲೆಹಾಕಿದರೆ, ಸೋಫಿ ಎಕಲ್‌ಸ್ಟನ್ ಅವರ ಅದ್ಬುತ ಬೌಲಿಂಗ್‌ನಲ್ಲಿ ಕೇವಲ 4 ರನ್ ಗಳಿಸಿದ ಆರ್ ಸಿಬಿ ಸೋಲೊಪ್ಪಿಕೊಂಡಿತು. 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ ಸತತವಾಗಿ ಎರಡು ಪಂದ್ಯಗಳನ್ನು ಸೋತಿದೆ.












Click it and Unblock the Notifications