ಏಷ್ಯನ್ ಗೇಮ್ಸ್‌ನಲ್ಲಿ ಕೇವಲ 0.6 ಅಂಕಗಳಿಂದ ಚಿನ್ನ ಕೈತಪ್ಪಿದರೂ ಕೋಟ್ಯಂತರ ಭಾರತೀಯರ ಹೃದಯ ಗೆದ್ದ ಶೂಟರ್ ಇಳವೆನಿಲ್ ವಳರಿವನ್
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ಶೂಟಿಂಗ್ ವಿಭಾಗದಲ್ಲಿ ಭಾರತದ ಭರವಸೆಯ ತಾರೆ, ಎರಡು ಬಾರಿಯ ಒಲಿಂಪಿಯನ್ ಇಳವೆನಿಲ್ ವಳರಿವನ್ ಅವರು 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಒಂದೇ ದಿನ ಎರಡು ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಏಷ್ಯನ್ ಗೇಮ್ಸ್‌ನ ವೈಯಕ್ತಿಕ 10 ಮೀಟರ್ ಏರ್ ರೈಫಲ್ ಫೈನಲ್ಸ್‌ನಲ್ಲಿ ಬಹುಪಾಲು ಮುನ್ನಡೆ ಕಾಯ್ದುಕೊಂಡಿದ್ದ ಇಳವೆನಿಲ್, ಕೊನೆಯ ಎರಡು ಶಾಟ್‌ಗಳಲ್ಲಿ ಸ್ವಲ್ಪದರಲ್ಲಿಯೇ ಎಡವಿದರು. ಕೇವಲ 0.6 ಅಂಕಗಳ (253.0 - 252.4) ಅಂತರದಿಂದ ಅವರು ಚಿನ್ನದ ಪದಕವನ್ನು ಕಳೆದುಕೊಂಡರು.

ಇದಕ್ಕೂ ಮುನ್ನ ಅವರು ತಂಡ ವಿಭಾಗದಲ್ಲಿಯೂ ಬೆಳ್ಳಿ ಗೆದ್ದು, ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು.
ವೈಯಕ್ತಿಕ ವಿಭಾಗದಲ್ಲಿ ಚಿನ್ನ ಕೈತಪ್ಪಿದರೂ ಅವರು ಕುಗ್ಗಲಿಲ್ಲ. ಈ ಸೋಲನ್ನ ಕೇವಲ ಒಂದು ಸೋಲು ಎಂದು ಪರಿಗಣಿಸದೆ, ಪಾಠವಾಗಿ ಸ್ವೀಕರಿಸಿದ್ದಾರೆ. "ನಾನು ಖಂಡಿತವಾಗಿಯೂ ಇನ್ನೂ ಒಳ್ಳೆಯ ನಿರ್ಧಾರಗಳನ್ನ ತೆಗೆದುಕೊಳ್ಳಬಹುದಿತ್ತು, ಆದರೆ ನಾನು ಹಾಗೆ ಮಾಡಲಿಲ್ಲ. ಹೀಗಾಗಿ, ಈ ಕೊನೆಯ ಮೂರು ಶಾಟ್‌ಗಳಿಂದ ನಾನು ಪಾಠ ಕಲಿತಿದ್ದೇನೆ" ಎಂದು ಹೇಳುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಇದು ಅವರ ಹತ್ತು ವರ್ಷಗಳ ಸತತ ಪರಿಶ್ರಮ ಮತ್ತು ಪ್ರಬುದ್ಧತೆಯನ್ನ ತೋರಿಸುತ್ತದೆ.
Elavenil Valarivan ಅಥ್ಲೆಟಿಕ್ಸ್‌ನಿಂದ ಶೂಟಿಂಗ್‌ಗೆ
ತಮಿಳುನಾಡಿನ ಕಡಲೂರಿನಲ್ಲಿ ಜನಿಸಿದ ಇಳವೆನಿಲ್, ಇವರು ಮೂರು ವರ್ಷದವರಿದ್ದಾಗ ಕುಟುಂಬದೊಂದಿಗೆ ಗುಜರಾತ್‌ನ ಅಹಮದಾಬಾದ್‌ಗೆ ವಲಸೆ ಹೋದರು. ಬಾಲ್ಯದಲ್ಲಿ ಇವರು ಶೂಟಿಂಗ್ ಪ್ರತಿಭೆಯಾಗಿರಲಿಲ್ಲ. ಬದಲಾಗಿ, ಹದಿಹರೆಯದವರೆಗೂ ಅವರು ಲಾಂಗ್-ಡಿಸ್ಟೆನ್ಸ್ (ದೂರದ ಓಟ) ಮತ್ತು ಸ್ಪ್ರಿಂಟ್ ಓಟಗಾರ್ತಿಯಾಗಿದ್ದರು.
ಆದ್ರೆ, 2014ರಲ್ಲಿ ಅವರು ಪೂರ್ಣಾವಧಿಯಾಗಿ ಶೂಟಿಂಗ್ ಕಡೆಗೆ ಮುಖ ಮಾಡಿದರು. ಅವರ ಕುಟುಂಬದಲ್ಲಿ ಯಾರಿಗೂ ಶೂಟಿಂಗ್ ಹಿನ್ನೆಲೆ ಇರಲಿಲ್ಲವಾದರೂ, ಪೋಷಕರು ಮಗಳ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಈ ಬೆಂಬಲವೇ ಅವರ ಯಶಸ್ಸಿನ ಮೆಟ್ಟಿಲಾಯಿತು.
ಜಾಗತಿಕ ಮಟ್ಟದ ಸಾಧನೆ ಮತ್ತು ಅರ್ಜುನಾ ಪ್ರಶಸ್ತಿ ಪುರಸ್ಕೃತೆ
ಶೂಟಿಂಗ್ ಆರಂಭಿಸಿದ ಕೇವಲ ನಾಲ್ಕೇ ವರ್ಷಗಳಲ್ಲಿ, ಅಂದರೆ 2018ರ ಹೊತ್ತಿಗೆ ಅವರು 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಜೂನಿಯರ್ ವಿಶ್ವ ದಾಖಲೆ ನಿರ್ಮಿಸಿದರು. ಸಿಡ್ನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನ ಪ್ರತಿನಿಧಿಸಿರುವ ಇವರು, ಐಎಸ್‌ಎಸ್‌ಎಫ್ ವಿಶ್ವಕಪ್ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಹಲವು ಪ್ರಶಸ್ತಿಗಳನ್ನ ಜಯಿಸಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಪ್ರತಿಷ್ಠಿತ 'ಅರ್ಜುನಾ ಪ್ರಶಸ್ತಿ' ನೀಡಿ ಗೌರವಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ
ಇಳವೆನಿಲ್ ವಳರಿವನ್ ಅವರ ಈ ಅವಳಿ ಬೆಳ್ಳಿ ಪದಕದ ಸಾಧನೆಗೆ ದೇಶಾದ್ಯಂತ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಭಾರತೀಯ ಶೂಟರ್‌ಗಳು ನಮಗೆ ಹೆಮ್ಮೆ ತರುತ್ತಲೇ ಇದ್ದಾರೆ! ಏಷ್ಯನ್ ಗೇಮ್ಸ್‌ನ 10 ಮೀಟರ್ ಏರ್ ರೈಫಲ್ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಇಳವೆನಿಲ್ ವಲರಿವನ್ ಅವರಿಗೆ ಅಭಿನಂದನೆಗಳು. ಇದು ಒಂದೇ ದಿನದಲ್ಲಿ ಅವರು ಗೆದ್ದ ಎರಡನೇ ಪದಕವಾಗಿದ್ದು, ಈ ಸಾಧನೆಯನ್ನ ಇನ್ನಷ್ಟು ವಿಶೇಷವಾಗಿಸಿದೆ. ಅವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ನನ್ನ ಶುಭಾಶಯಗಳು" ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Indian shooters keep making us proud!
— PMO India (@PMOIndia) September 20, 2026
Congrats to Elavenil Valarivan for winning a Silver Medal in the 10m Air Rifle Women Individual event at the Asian Games. This was her second medal of the day, making this even more special. My best wishes to her for the endeavours ahead: PM… pic.twitter.com/dAxgrV6ZIY


Click it and Unblock the Notifications
