Richest Cricketer: 2024ರ ಭಾರತದ ಶ್ರೀಮಂತ ಕ್ರಿಕೆಟಿಗರು ಇವರು
2024 ಮುಗಿಯುತ್ತಾ ಬಂದಿದ್ದು 2025ರ ಹೊಸ ವರ್ಷವನ್ನು ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ಅನೇಕ ಕ್ರಿಕೆಟಿಗರು ಈ ವರ್ಷ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಆಟವಷ್ಟೇ ಅಲ್ಲ ಅದು ಕೋಟಿ ಕೋಟಿ ಸಂಪಾದನೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಅನೇಕ ಕ್ರಿಕೆಟಿಗರು ಕೋಟ್ಯಧಿಪತಿಗಳಾಗಿದ್ದಾರೆ.
ಹಲವು ಕ್ರಿಕೆಟಿಗರು ನೂರಾರು ಕೋಟಿ ರೂಪಾಯಿ ಗಳಿಸಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ಹಲವು ಆಟಗಾರರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದರೆ, ಇನ್ನೂ ಹಲವರು ವಿವಿಧ ಜಾಹೀರಾತುಗಳ ಮೂಲಕ ಕೋಟಿ ಕೋಟಿ ದುಡಿಯುತ್ತಿದ್ದಾರೆ. 2024ರಲ್ಲಿ ಭಾರತದ ಟಾಪ್ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿ ಇಲ್ಲಿದೆ ನೋಡಿ.

ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದೇವರು ಎಂದೇ ಪ್ರಸಿದ್ಧವಾಗಿರುವ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಅವರ ಆದಾಯ ಏನೂ ಕಡಿಮೆಯಾಗಿಲ್ಲ. ಅನೇಕ ವ್ಯವಹಾರಗಳನ್ನು ಹೊಂದಿರುವ ಸಚಿನ್, ಇಂದಿಗೂ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಕೋಟಿ ಕೋಟಿ ದುಡಿಯುತ್ತಿದ್ದಾರೆ. 50 ವರ್ಷದ ಸಚಿನ್ ತೆಂಡೂಲ್ಕರ್ ಆಸ್ತಿ ಮೌಲ್ಯ 1,440 ಕೋಟಿ ರೂಪಾಯಿಗಳಷ್ಟಾಗಿದ್ದು ವಿಶ್ವದ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.
ಎಂಎಸ್ ಧೋನಿ
ಭಾರತ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಜಾರ್ಖಂಡ್ ಪುಟ್ಟ ರಾಜ್ಯದಿಂದ ಬಂದು ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ ಆಗಿ ಮಿಂಚಿದರು. ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿದ್ದ ಎಂಎಸ್ ಧೋನಿ ಇಂದು ನೂರಾರು ಕೋಟಿ ರೂಪಾಯಿ ಒಡೆಯನಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ.
ರೀಬಾಕ್, ಸೊನಾಟ, ಗಲ್ಫ್ ಆಯಿಲ್ ಸೇರಿದಂತೆ ಅನೇಕ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು ಕೋಟಿ ಕೋಟಿ ದುಡಿಯುತ್ತಿದ್ದಾರೆ. ಚೆನ್ನೈಯಿನ್ ಎಫ್‌ಸಿ, ಫಿಟ್‌ನೆಸ್ ಸೆಂಟರ್ ಚೈನ್ ಸೇರಿದಂತೆ ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸದ್ಯ 42 ವರ್ಷದ ಧೋನಿಯ ಒಟ್ಟಾರೆ ಆಸ್ತಿ ಮೌಲ್ಯ 931 ಕೋಟಿ ರೂಪಾಯಿಗಳಷ್ಟು ಎಂದು ಅಂದಾಜಿಸಲಾಗಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ 21 ಕೋಟಿ ರೂಪಾಯಿ ನೀಡಿ ರಿಟೇನ್ ಮಾಡಿಕೊಂಡಿದೆ. ಪೂಮಾ, ಆಡಿ ಮತ್ತು ಎಮ್‌ಆರ್‌ಎಫ್‌ನಂತಹ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಜಿಮ್ ಚೈನ್ ಉದ್ಯಮದಲ್ಲಿ ಮತ್ತು ಬಟ್ಟೆ ಉತ್ಪಾದಕ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. 35 ವರ್ಷದ ವಿರಾಟ್ ಕೊಹ್ಲಿ ಒಟ್ಟು ಆಸ್ತಿ ಮೌಲ್ಯ 850 ಕೋಟಿ ರೂಪಾಯಿಗಳಾಗಿದೆ.
ಸೌರವ್ ಗಂಗೂಲಿ
ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ 677 ಕೋಟಿ ರೂಪಾಯಿ ಆಸ್ತಿ ಮೌಲ್ಯವ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ಸಾಕಷ್ಟು ಹಣ ಗಳಿಸಿದ್ದಾರೆ. ಪೆಪ್ಸಿ, ಪೂಮಾ ಮತ್ತು ಟಾಟಾದಂತಹ ಬ್ರಾಂಡ್‌ಗಳ ಕೊತೆ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡಿದ್ದು ಸಾಕಷ್ಟು ಹಣ ಗಳಿಸಿದ್ದಾರೆ.
ವೀರೇಂದ್ರ ಸೆಹ್ವಾಗ್
ಭಾರತ ತಂಡದ ಮಾಜಿ ಆರಂಭಿಕ ಆಟಗಾರ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಹೆಸರಾಗಿದ್ದ ವೀರೇಂದ್ರ ಸೆಹ್ವಾಗ್ ಕೂಡ ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 338 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಅಡಿಡಾಸ್, ಸ್ಯಾಮ್‌ಸಂಗ್ ಮತ್ತು ಬೂಸ್ಟ್‌ನಂತಹ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಭಾರತ ತಂಡದ ಮಾಜಿ ಆಲ್‌ರೌಂಡರ್. ಅವರ ಒಟ್ಟು ಆಸ್ತಿ ಮೌಲ್ಯ 296 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಪೂಮಾ, ಪೆಪ್ಸಿ ಸೇರಿದಂತೆ ಅನೇಕ ಕಂಪನಿಗಳ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ. ಹಲವು ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಉಳಿದಂತೆ ಸುನಿಲ್ ಗವಾಸ್ಕರ್ 262 ಕೋಟಿ ರೂಪಾಯಿ ಆಸ್ತಿ ಮೌಲ್ಯ ಹೊಂದಿದ್ದು ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಭಾರತ ತಂಡಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ದೇವ್ 8ನೇ ಸ್ಥಾನದಲ್ಲಿದ್ದು 248 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದಾರೆ. ಸುರೇಶ್ ರೈನಾ 211 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು 9ನೇ ಸ್ಥಾನದಲ್ಲಿದ್ದು, ರಾಹುಲ್ ದ್ರಾವಿಡ್ 194 ಕೋಟಿ ರೂಪಾಯಿ ಆಸ್ತಿ ಮೌಲ್ಯ ಹೊಂದಿದ್ದು 10ನೇ ಸ್ಥಾನದಲ್ಲಿದ್ದಾರೆ.












Click it and Unblock the Notifications