"ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು": ಸಿಎಸ್‌ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ?
Devdutt Padikkal: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆದ ಐಪಿಎಲ್ 2026ರ 11ನೇ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ರನ್‌ಗಳ ಹೊಳೆಯನ್ನೇ ಹರಿಸಿದೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಸ್ಟಾರ್ ಬ್ಯಾಟರ್ ಕನ್ನಡಿಗ ದೇವದತ್ ಪಡಿಕ್ಕಲ್ ಮಾತನಾಡಿ, "ಟೈಮ್-ಔಟ್ ಸಮಯದಲ್ಲಿ ಪಂದ್ಯದ ವೇಗವನ್ನು ಕಾಯ್ದುಕೊಳ್ಳುವಂತೆ ಸಂದೇಶ ಬಂದಿತ್ತು" ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಟಿಮ್ ಡೇವಿಡ್ ಆಟಕ್ಕೆ ದೇವ್ ಫಿದಾ
ಮುಂದುವರಿದು ಮಾತನಾಡಿದ ಅವರು, "ನಾನು ಔಟ್ ಆಗಿದ್ದಕ್ಕೆ ನನಗೆ ಒಂದು ರೀತಿಯಲ್ಲಿ ಸಂತೋಷವೇ ಆಯಿತು. ಏಕೆಂದರೆ ನಂತರ ಬಂದ ಟಿಮ್ ಡೇವಿಡ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಅದ್ಭುತ ಮನರಂಜನೆಯನ್ನು ನೋಡಲು ಸಾಧ್ಯವಾಯಿತು," ಎಂದು ಹೇಳಿದರು. ಆರಂಭದಲ್ಲಿ ಪಿಚ್ ಸ್ವಲ್ಪ ನಿಧಾನಗತಿಯಿಂದ ಕೂಡಿತ್ತು ಮತ್ತು ಹೊಸ ಚೆಂಡು ಬ್ಯಾಟ್‌ಗೆ ಸರಿಯಾಗಿ ಬರುತ್ತಿರಲಿಲ್ಲ. ಹಾಗಾಗಿ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳದೆ ಜಾಗರೂಕತೆಯಿಂದ ಆಡುವುದು ನಮ್ಮ ಯೋಜನೆಯಾಗಿತ್ತು. ಇನ್ನಿಂಗ್ಸ್ ಅಂತ್ಯದ ವೇಳೆಗೆ ರನ್ ವೇಗ ಹೆಚ್ಚಿಸುವ ವಿಶ್ವಾಸ ನಮಗಿತ್ತು," ಎಂದು ವಿವರಿಸಿದರು.

ಚಿನ್ನಸ್ವಾಮಿ ಮೈದಾನದಲ್ಲಿ ಇಂತಿಷ್ಟೇ ರನ್ ಎಂದು ಗುರಿ ನಿಗದಿಪಡಿಸುವುದು ಕಷ್ಟ. ಆದರೆ, ಒಮ್ಮೆ ಲಯ ಕಂಡುಕೊಂಡ ಮೇಲೆ ಅದನ್ನು ಮುಂದುವರಿಸುವುದು ಮುಖ್ಯ. ಸದ್ಯ ತಂಡ ಪೇರಿಸಿರುವ ಮೊತ್ತವು ಗೆಲುವಿಗೆ ಸಾಕಾಗುತ್ತದೆ ಎಂಬ ಭರವಸೆ ನನಗಿದೆ ಎಂದು ದೇವದತ್ ಪಡಿಕ್ಕಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಕಾ ಗೆಲ್ಲುತ್ತೇವೆ ಎಂದ ಪಡಿಕ್ಕಲ್
ಕಳೆದ ವರ್ಷದಿಂದ ಈವರೆಗೆ ನನ್ನಲ್ಲಿ ನಾನು ಕಂಡುಕೊಂಡ ದೊಡ್ಡ ಬದಲಾವಣೆ ಎಂದರೆ ಅದು ನನ್ನ ಮೇಲಿರುವ ನಂಬಿಕೆ. ಈ ಆತ್ಮವಿಶ್ವಾಸವೇ ಇಂದು ನನ್ನ ಯಶಸ್ಸಿಗೆ ಕಾರಣ ಎಂದು ಅವರು ತಿಳಿಸಿದರು. ಒಟ್ಟಿನಲ್ಲಿ ಹೇಳುವುದಾದರೆ, ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ಧ ಬೃಹತ್ ಮೊತ್ತ ಪೇರಿಸುವಲ್ಲಿ ಪಡಿಕ್ಕಲ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಉಳಿದ ಆಟಗಾರರ ಸ್ಫೋಟಕ ಆಟ ಪ್ರಮುಖ ಪಾತ್ರವಹಿಸಿದೆ.












Click it and Unblock the Notifications