DC vs LSG: ಅಶುತೋಷ್ ಶರ್ಮಾ ಅಬ್ಬರ; ಎಲ್‌ಎಸ್‌ಜಿ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ 2025ರ ಆವೃತ್ತಿಯಲ್ಲಿ ಮೊದಲ ರೋಚಕ ಪಂದ್ಯಕ್ಕೆ ವಿಶಾಖಪಟ್ಟಣ ಸಾಕ್ಷಿಯಾಗಿದೆ. ಕೊನೆಯ ಓವರ್ ವರೆಗೂ ಗೆಲುವು ಯಾರ ಕಡೆಗೆ ಎಂದು ಪ್ರೇಕ್ಷಕರನ್ನು ಸೀಟಿನ ಅಂಚಿನಲ್ಲಿ ಕೂರಿಸಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿದೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದು ದಾಖಲೆ ಬರೆಯಿತು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.

ಮಿಚೆಲ್ ಮಾರ್ಷ್ 36 ಎಸೆತಗಳಲ್ಲಿ 6 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 72 ರನ್ ಗಳಿಸಿದರೆ, ನಿಕೋಲಸ್ ಪೂರನ್ 30 ಎಸೆತಗಳಲ್ಲಿ 6 ಬೌಂಡರಿ 7 ಸಿಕ್ಸರ್ ಸಹಿತ 75 ರನ್ ಗಳಿಸಿದರು. ಒಂದು ಹಂತದಲ್ಲಿ 240-250 ರನ್ ಗಳಿಸುವ ಸ್ಥಿತಿಯಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ಸತತವಾಗಿ ವಿಕೆಟ್ ಕಳೆದುಕೊಂಡು 209 ರನ್ ಮಾತ್ರ ಕಲೆಹಾಕಿತು.
ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆಯುವ ಮೂಲಕ ಲಕ್ನೋ ರನ್ ಗಳಿಕೆಗೆ ಕಡಿವಾಣ ಹಾಕಿದರು. ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ವಿಪ್ರಜ್ ನಿಗಮ್ ಮತ್ತು ಮುಖೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.
ರಣರೋಚಕ ಪಂದ್ಯ
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲನೇ ಓವರ್ ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಮೊದಲನೇ ಓವರ್ ನಲ್ಲೇ ಎರಡು ವಿಕೆಟ್ ಪಡೆದುಕೊಂಡರು. 7 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು.
ಫಾಫ್ ಡುಪ್ಲೆಸಿಸ್ 18 ಎಸೆತಗಳಲ್ಲಿ 29 ರನ್ ಗಳಿಸಿದರು. ನಾಯಕ ಅಕ್ಷರ್ ಪಟೇಲ್ 11 ಎಸೆತಗಳಲ್ಲಿ 22 ರನ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್ 22 ಎಸೆತಗಳಲ್ಲಿ 34 ರನ್ ಗಳಿಸಿದರು. ವಿಪ್ರಜ್ ನಿಗಮ್ 15 ಎಸೆತಗಳಲ್ಲಿ 5 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 39 ರನ್ ಗಳಿಸಿ ಅಬ್ಬರಿಸಿದರು.
ಅಶುತೋಷ್ ಶರ್ಮಾ 31 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 66 ರನ್ ಗಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್‌ಗೆ ರೋಚಕ ಗೆಲುವು ತಂದುಕೊಟ್ಟರು. ಸೋತೇ ಹೋದರು ಎಂದುಕೊಳ್ಳುವಾಗಲೇ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಹೋರಾಟ ಅಮೋಘವಾಗಿತ್ತು.












Click it and Unblock the Notifications