ತಕ್ಷಣದಿಂದಲೇ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯಲಿದ್ದಾರೆ ರೊನಾಲ್ಡೊ
ವಿಶ್ವಕಪ್ ಪುಟ್ಬಾಲ್ ಸಂದರ್ಭದಲ್ಲಿಯೇ ಕ್ರಿಸ್ಟಿಯಾನೊ ರೊನಾಲ್ಡೊ ಅಭಿಮಾನಿಗಳಿಗೆ ಬೇಸರ ಮೂಡಿಸುವ ಸುದ್ದಿಯೊಂದು ಬಂದಿದೆ. ವಿಶ್ವದ ಶೇಷ್ಠ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯಲಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದೆ. ಪರಸ್ಪರ ಒಪ್ಪಂದದ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ತಕ್ಷಣದಿಂದಲೇ ತೊರೆಯಲಿದ್ದಾರೆ ಎಂದು ಟ್ವೀಟ್ ಹೇಳಿದೆ.
Cristiano Ronaldo is to leave Manchester United by mutual agreement, with immediate effect.
— Manchester United (@ManUtd) November 22, 2022
The club thanks him for his immense contribution across two spells at Old Trafford.#MUFC
ಕೆಲವು ದಿನಗಳ ಹಿಂದೆ ನಡೆದ ಸಂದರ್ಶನದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಹಲವಾರು ವಿಚಾರಗಳಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಟೀಕಿಸಿದ್ದರು. ತನ್ನನ್ನು ಕ್ಲಬ್‌ನಿಂದ ಹೊರಹಾಕಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರಿದ್ದರು.

ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಮಂಗಳವಾರ ರಾತ್ರಿ ಮಾಡಿರುವ ಟ್ವೀಟ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ಲಬ್ ಬಿಡಲಿದ್ದಾರೆ. ಅವರು ಕ್ಲಬ್‌ಗೆ ನೀಡಿದ ಕೊಡುಗೆಗಾಗಿ ಧನ್ಯವಾದ ಅರ್ಪಿಸಲಾಗುತ್ತಿದೆ ಎಂದು ತಿಳಿಸಿದೆ.
"ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನೊಂದಿನ ನನ್ನ ವಿವಾದವು ವಿಶ್ವಕಪ್‌ನಲ್ಲಿ ಪೋರ್ಚುಗಲ್ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದರು.
ಟಿವಿ ಸಂದರ್ಶನದಲ್ಲಿ ಮ್ಯಾಂಚೆಸ್ಟರ್ ಯುನೈಟಡ್ ಕ್ಲಬ್ ಮತ್ತು ಕೋಚ್ ಎರಿಚ್ ಟೆನ್ ಹಾಗ್ ವಿರುದ್ಧ ಹಲವು ಟೀಕೆಗಳನ್ನು ಮಾಡಿದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ತಂಡದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.
"ಇತ್ತೀಚಿನ ಹಲವು ಘಟನೆಗಳು, ಆ ಸಂದರ್ಶನ ಮತ್ತು ಇತರ ಅಂಶಗಳು ಆಟಗಾರನ ಮೇಲೆ ಕೆಲವು ಸಲ ಪ್ರಭಾವ ಬೀರಬಹುದು. ಆದರೆ ಅದು ತಂಡದ ಮೇಲೆ ಪ್ರಭಾವವನ್ನು ಬೀರುವುದಿಲ್ಲ" ಎಂದು ಕ್ರಿಸ್ಟಿಯಾನೊ ರೊನಾಲ್ಡೊ ತಿಳಿಸಿದ್ದರು.
ಮ್ಯಾಂಚೆಸ್ಟರ್ ಯುನೈಟಡ್ ಕ್ಲಬ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ ಸರಿಯಾ ಗೌರವ ನೀಡುತ್ತಿಲ್ಲ ಎಂಬ ಸುದ್ದಿಗಳು ಹಬ್ಬಿದ್ದವು. ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಕಳೆದ ತಿಂಗಳು ಬದಲಿ ಆಟಗಾರನಾಗಿ ಆಡಲು ರೊನಾಲ್ಡೊಗೆ ಸೂಚಿಸಲಾಗಿತ್ತು. ಆದರೆ ಅವರು ನಿರಾಕರಿಸಿದ್ದರು.
ಈಗ ಫೀಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ನಡೆಯುತ್ತಿರುವ ಹೊತ್ತಿನಲ್ಲಿಯೇ ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಚೆಸ್ಟರ್ ಯುನೈಟಡ್ ಕ್ಲಬ್ ತೊರೆಯುವ ಸುದ್ದಿಯೂ ಹೊರಬಿದ್ದಿದೆ.
ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಮಾರಾಟಕ್ಕೆ; ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯಲಿದ್ದಾರೆ ಎಂಬ ಸುದ್ದಿಯ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಮಾರಾಟಕ್ಕಿದೆ ಎಂಬ ವರದಿಗಳು ಬರುತ್ತಿವೆ.
ಸದ್ಯ ಅಮೆರಿಕದ ಗ್ಲೇಜರ್ ಕುಟುಂಬ ಕ್ಲಬ್ ಮಾಲೀಕರು. 17 ವರ್ಷಗಳಿಂದ ಅವರೇ ಕ್ಲಬ್ ಮಾಲೀಕರಾಗಿದ್ದಾರೆ. ಈಗ ಕ್ಲಬ್ ಮಾರಾಟ ಮಾಡಲು ಬಯಸಿದ್ದೇವೆ ಎಂದು ಅವರೇ ಮಾಹಿತಿ ನೀಡಿದ್ದಾರೆ.
ಹೊಸ ಹೂಡಿಕೆ, ಮಾರಾಟ ಅಥವ ಇತರ ವಹಿವಾಟು ಸೇರಿದಂತೆ ಪರ್ಯಾಯ ಕಾರ್ಯತಂತ್ರಗಳನ್ನು ಕ್ಲಬ್ ಪರಿಗಣಿಸುತ್ತದೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಪ್ರಕಟಣೆ ಹೇಳಿದೆ. ಸದ್ಯದ ಪ್ರೀಮಿಯರ್ ಲೀಗ್‌ನಲ್ಲಿ ಕ್ಲಬ್ 11 ಅಂಗಳೊಂದಿಗೆ 5ನೇ ಸ್ಥಾನದಲ್ಲಿದೆ.
ಇಂಗ್ಲೆಂಡ್‌ನ ಒಲ್ಡ್ ಟ್ರಾಫರ್ಡ್ ತಳಹದಿಯ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಅನ್ನು 2005ರಲ್ಲಿ ಅಮೆರಿಕದ ಗ್ಲೇಜರ್ ಕುಟುಂಬ ಖರೀದಿ ಮಾಡಿತ್ತು. 2013ರಲ್ಲಿ ಕ್ಲಬ್ ಮ್ಯಾನೇಜರ್ ಅಲೆಕ್ಸ್ ನಿವೃತ್ತಿಯ ಬಳಿಕ ಕಳಪೆ ಪ್ರದರ್ಶನದ ಮೂಲಕ ಕ್ಲಬ್ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆದರೆ ಜನಪ್ರಿಯತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಸಂಭ್ರಮಾಚರಣೆಗಾಗಿ ರಜೆ; ಮಂಗಳವಾರ ನಡೆದ ಫೀಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಗೋಲುಗಳ ಅಂತರದಲ್ಲಿ ಜಯಗಳಿಸಿತ್ತು. ಈ ಜಯದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಲು ಸೌದಿ ದೊರೆ ದೇಶಾದ್ಯಂತ ರಜೆ ಘೋಷಣೆ ಮಾಡಿದ್ದಾರೆ.












Click it and Unblock the Notifications