Champions Trophy 2025: ಚಾಂಪಿಯನ್ಸ್ ಟ್ರೋಫಿ ಅಂಕಪಟ್ಟಿ; ಸೆಮಿಫೈನಲ್‌ನಲ್ಲಿ ಭಾರತದ ಎದುರಾಳಿ ಯಾರು?
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. 29 ವರ್ಷಗಳ ಬಳಿಕ ಐಸಿಸಿ ಪಂದ್ಯಾವಳಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ಮೊದಲ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಪಂದ್ಯಾವಳಿಯಿಂದಲೇ ಹೊರಬಿದ್ದಿದೆ. ಪಾಕಿಸ್ತಾನದ ಜೊತೆ ಬಾಂಗ್ಲಾದೇಶ ಕೂಡ ಹೊರಬಿದ್ದಿದ್ದು ಈ ಎರಡೂ ತಂಡಗಳು ಫೆಬ್ರವರಿ 27ರಂದು ಮುಖಾಮುಖಿಯಾಗಲಿದ್ದು ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ 8 ತಂಡಗಳು ಆಡುತ್ತಿದ್ದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನ್ಯೂಜಿಲೆಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳು ಎ ಗುಂಪಿಯನಲ್ಲಿದ್ದರೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಫ್ಗಾನಿಸ್ತಾನ ಬಿ ಗುಂಪಿನಲ್ಲಿ ಆಡುತ್ತಿವೆ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಆಡಿರುವ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಸೆಮಿಫೈನಲ್ ತಲುಪುವ ನೆಚ್ಚಿನ ತಂಡಗಳಾಗಿವೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯ ಸೋತಿರುವ ಇಂಗ್ಲೆಂಡ್ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಸೆಮಿಫೈನಲ್ ತಲುಪಲು ಅವಕಾಶವಿರುತ್ತದೆ.
ಚಾಂಪಿಯನ್ಸ್ ಟ್ರೋಫಿ ಅಂಕಪಟ್ಟಿ ಹೇಗಿದೆ?
ಎ ಗುಂಪಿನಲ್ಲಿ 2 ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್ 4 ಅಂಕಗಳೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ ಭಾರತ ಕೂಡ 2 ಪಂದ್ಯ ಗೆದ್ದು 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ರನ್‌ರೇಟ್ ಉತ್ತಮವಾಗಿರುವ ಕಾರಣ ನ್ಯೂಜಿಲೆಂಡ್ ಸದ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಮಾರ್ಚ್ 2 ರಂದು ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು ಅಂದು ಗೆಲ್ಲುವ ತಂಡ ಎ ಗುಂಪಿನಲ್ಲಿ ಮೊದಲನೇ ಸ್ಥಾನದಲ್ಲಿ ಸೆಮಿಫೈನಲ್ ತಲುಪಲಿದೆ.
ಬಿ ಗುಂಪಿನಲ್ಲಿ ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಮಂಗಳವಾರ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು ತಲಾ 1 ಅಂಕ ಹಂಚಿಕೊಂಡಿವೆ. ಅಫ್ಘಾನಿಸ್ತಾನದ ವಿರುದ್ಧ ಸೋತಿರುವ ಇಂಗ್ಲೆಂಡ್ ಸೆಮಿಫೈನಲ್ ರೇಸ್‌ನಿಂದಲೇ ಹೊರಬಿದ್ದಿದೆ.
ಭಾರತದ ಎದುರಾಳಿ ಯಾರು?
ಸೆಮಿಫೈನಲ್‌ನಲ್ಲಿ ಭಾರತ ಎದುರಾಳಿ ಎನ್ನುವುದು ಮಾರ್ಚ್ 2ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಳಿಕ ತಿಳಿಯಲಿದೆ. ಭಾರತ ಏನಾದರೂ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದರೆ, ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದ ಜೊತೆ ಭಾರತ ಸೆಮಿಫೈನಲ್‌ನಲ್ಲಿ ಆಡಲಿದೆ. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತರೆ ಬಿ ಗುಂಪಿನಲ್ಲಿ ಮೊದಲನೇ ಸ್ಥಾನ ಪಡೆಯುವ ತಂಡದ ವಿರುದ್ಧ ಆಡಲಿದೆ.
ಮಾರ್ಚ್ 4ರಂದು ಮೊದಲನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಮಾರ್ಚ್ 5ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಫೈನಲ್ ತಲುಪಿದರೆ ದುಬೈನಲ್ಲಿ ಪಂದ್ಯ ನಡೆಯಲಿದ್ದು, ಭಾರತ ಫೈನಲ್ ತಲುಪುವಲ್ಲಿ ವಿಫಲವಾದರೆ ಕರಾಚಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ.












Click it and Unblock the Notifications