Bengaluru Bandh; ಬಿಎಂಟಿಸಿ ಏರಿದ ಅನಿಲ್ ಕುಂಬ್ಳೆ, ಫೋಟೋ ವೈರಲ್
ಬೆಂಗಳೂರು, ಸೆಪ್ಟೆಂಬರ್ 11; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ ಪ್ರಯಾಣಿಕರ ನೆರವಿಗೆ ಬಿಎಂಟಿಸಿ ಬಸ್ ಇದೆ.
ಬಂದ್ ಹಿನ್ನಲೆಯಲ್ಲಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕ್ಯಾಬ್ ಸಿಗದೇ ಬಿಎಂಟಿಸಿ ಬಸ್ ಏರಿದ್ದಾರೆ. ಈ ಕುರಿತು ಅವರೇ ಫೋಟೋ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್ ಆಗುತ್ತಿದೆ.

12.29ಕ್ಕೆ ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ 'BMTC trip back home today from the airport' ಎಂದು ಬರೆದಿದ್ದಾರೆ. ಈ ಫೋಟೋದಲ್ಲಿ ಏರ್‌ಪೋರ್ಟ್‌ನಿಂದ ಆಗಮಿಸುವ ಬಸ್ ಸಂಪೂರ್ಣ ಭರ್ತಿಯಾಗಿರುವುದನ್ನು ಸಹ ಕಾಣಬಹುದಾಗಿದೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಸುಮಾರು 72 ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ಇದರಲ್ಲಿ ವಿಮಾನ ನಿಲ್ದಾಣದ ಟ್ಯಾಕ್ಸಿಗಳು ಸಹ ಸೇರಿವೆ. ಆದ್ದರಿಂದ ಟ್ಯಾಕ್ಸಿ ಇಲ್ಲದೇ ಪ್ರಯಾಣಿಕರು ಬಸ್ ಏರಿದ್ದಾರೆ.
BMTC trip back home today from the airport. pic.twitter.com/jUTfHk1HrE
— Anil Kumble (@anilkumble1074) September 11, 2023
ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನಗಳ ಸಂಚಾರ ಬಂದ್ ಮಾಡುವುದಾಗಿ ಒಕ್ಕೂಟ ಹೇಳಿತ್ತು. ಆದರೆ ಸೋಮವಾರ ಮುಂಜಾನೆ ವಿಮಾನ ನಿಲ್ದಾಣಕ್ಕೆ ಹಲವು ಟ್ಯಾಕ್ಸಿಗಳು ಸಂಚಾರ ನಡೆಸಿದ್ದವು.
ದೇವನಹಳ್ಳಿ ಬಳಿ ಮುಂಜಾನೆ ಪ್ರಯಾಣಿಕರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೂರು ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟವಾಗಿತ್ತು. ಎರಡು ಊಬರ್ ಮತ್ತು ಮತ್ತೊಂದು ಕೆಎಸ್‌ಟಿಡಿಸಿಯ ಟ್ಯಾಕ್ಸಿಗೆ ಯಾರೋ ಕಲ್ಲು ತೂರಿದ್ದರು.
ವಿಮಾನ ನಿಲ್ದಾಣದಿಂದ ಮರಳುತ್ತಿದ್ದ ಟ್ಯಾಕ್ಸಿ ಚಾಲಕನನ್ನು ಅಡ್ಡಗಟ್ಟಿದ್ದ ಕೆಲವರು, ಆತನಿಗೆ ಶಾಲು, ಪೇಟ ತೊಡಿಸಿ ಸನ್ಮಾನಿಸಿದ್ದರು. ಅಲ್ಲದೇ ಮುಖದ ಮೇಲೆ ಉಗಿದು ಅವಮಾನ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಸ್ಟಾಂಡ್ ಬಳಿ ಕಾರು ಹೊರ ತೆಗೆಯಬೇಡಿ ಎಂದು ಚಾಲಕರಿಗೆ ಮಾಹಿತಿ ನೀಡಲಾಗುತ್ತಿದೆ. ಅಲ್ಲಿ ಯಾವುದೇ ಗಲಾಟೆ ನಡೆಯದಂತೆ ತಡೆಯಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಿಎಂಟಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನಕ್ಕಿಂತ 100 ಟ್ರಿಪ್ ಹೆಚ್ಚು ಬಸ್‌ಗಳನ್ನು ಓಡಿಸುತ್ತಿದೆ. ಆದ್ದರಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಬಸ್ ಮೂಲಕ ಬೆಂಗಳೂರು ನಗರಕ್ಕೆ ವಾಪಸ್ ಆಗಲು ಅನುಕೂಲವಿದೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾತನಾಡಿದರು, "ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟ ಮುಷ್ಕರ ನಡೆಸುತ್ತಿದ್ದು, ಬಂದ್ ಮಾಡಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು' ಎಂದರು.
"ನಾವು ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿ ತಂದಿದ್ದೇವೆ. ಅದರಿಂದ ಖಾಸಗಿ ಬಸ್ನವರು ನಷ್ಟ ಆಗಿದೆ ಎನ್ನುತ್ತಿದ್ದಾರೆ. ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಸಾರಿಗೆಯವರ ಈ ಬೇಡಿಕೆ ಈಡೇರಿಸಲು ಆಗುವುದಿಲ್ಲ" ಎಂದು ಹಣಕಾಸು ಸಚಿವರು ಆದ ಮುಖ್ಯಮಂತ್ರಿಗಳು ಹೇಳಿದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿ, "ಖಾಸಗಿ ಸಾರಿಗೆ ಒಕ್ಕೂಟಕ್ಕೆ ಹೋರಾಟ ಮಾಡುವ ಹಕ್ಕು ಇದೆ. ಖಾಸಗಿ ಬಸ್, ಆಟೋ ಚಾಲಕರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಓಲಾ, ಉಬರ್ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ" ಎಂದು ಆರೋಪಿಸಿದರು.
ಸೋಮವಾರ ರಾತ್ರಿ 12ರ ತನಕ ಖಾಸಗಿ ವಾಹನಗಳ ಸಂಚಾರ ಬಂದ್ ಮಾಡುತ್ತೇವೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ. ಬಂದ್ ಕಾರಣ ಬಿಎಂಟಿಸಿ ಬಸ್, ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ.












Click it and Unblock the Notifications