India vs England: ಭಾರತ ಟೆಸ್ಟ್ ತಂಡ, ನಾಯಕನ ಆಯ್ಕೆಗೆ ಮುಹೂರ್ತ ನಿಗದಿ
ಭಾರತ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಐಪಿಎಲ್ ಮತ್ತೆ ಆರಂಭವಾಗುವ ಸೂಚನೆ ಸಿಕ್ಕಿದೆ. ಐಪಿಎಲ್ ಬಳಿಕ ಭಾರತ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಲಿದ್ದು, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ ಆಡಲಿದೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಮುಂದಿನ ನಾಯಕ ಯಾರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎಲ್ಲಾ ಪ್ರಶ್ನೆಗಳಿಗೂ ತೆರೆ ಎಳೆಯಲು ಬಿಸಿಸಿಐ ನಿರ್ಧರಿಸಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇ 23 ರಂದು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಘೋಷಿಸಲಿದೆ. ಭಾರತ ತಂಡದ ಮುಂದಿನ ನಾಯಕ ಯಾರು ಎನ್ನುವ ಪ್ರಶ್ನೆಗೂ ಅಂದೇ ಉತ್ತರ ಸಿಗಲಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ತಂಡವನ್ನು ಮೇ 20 ರೊಳಗೆ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು, ಆದರೆ ಈಗ ಇನ್ನೂ ಮೂರು ದಿನ ತಡವಾಗಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ವಿರಾಟ್ ಕೊಹ್ಲಿಯಿಂದಾಗಿ ವಿಳಂಬ?
ಭಾರತ ಟೆಸ್ಟ್ ತಂಡ ಮತ್ತು ನಾಯಕನ ಹೆಸರನ್ನು ನಿಗದಿತ ಸಮಯಕ್ಕೆ ಘೋಷಣೆ ಮಾಡಲು ಬಿಸಿಸಿಐ ಸಜ್ಜಾಗಿತ್ತು, ಆದರೆ ವಿರಾಟ್ ಕೊಹ್ಲಿ ನಿವೃತ್ತಿಯಾಗುವ ಬಗ್ಗೆ ಬಿಸಿಸಿಐಗೆ ಮಾಹಿತಿ ಕೊಟ್ಟ ಬೆನ್ನಲ್ಲೇ ತಂಡದ ಘೋಷಣೆಯನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ.
ವಿರಾಟ್ ಕೊಹ್ಲಿ ತನ್ನ ನಿರ್ಧಾರವನ್ನು ಬದಲಾಯಿಸುವಂತೆ ಬಿಸಿಸಿಐ ಮನವೊಲಿಸಲು ಪ್ರಯತ್ನಿಸುತ್ತಿದೆ. ಭಾರತದ ಮಾಜಿ ನಾಯಕ ನಿರ್ಧಾರದಿಂದ ಹಿಂದೆ ಸರಿಯುತ್ತಾರಾ ಎನ್ನುವುದನ್ನು ಸಮಯವೇ ತಿಳಿಸಲಿದೆ. ಈ ಸ್ಫೋಟಕ ಸುದ್ದಿಯೇ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಮೇ 20 ರ ಬದಲು ಮೇ 23 ರಂದು ಬಿಡುಗಡೆ ಮಾಡಲು ಕಾರಣವಾಗಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಶುಭಮನ್ ಗಿಲ್‌ಗೆ ನಾಯಕತ್ವ?
ರೋಹಿತ್ ಶರ್ಮಾ ಅವರ ನಿವೃತ್ತಿ ಬೆನ್ನಲ್ಲೇ ಟೆಸ್ಟ್ ತಂಡಕ್ಕೆ ನಾಯಕತ್ವ ವಹಿಸಲು ಹಲವು ಹೆಸರುಗಳು ಕೇಳಿ ಬರುತ್ತಿವೆ. ವೇಗಿ ಜಸ್ಪ್ರೀತ್ ಬುಮ್ರಾ, ಶುಭಮನ್ ಗಿಲ್, ರಿಷಬ್ ಪಂತ್, ಕೆಎಲ್ ರಾಹುಲ್ ಅವರ ಹೆಸರು ಮುಂಚೂಣಿಯಲ್ಲಿದ್ದು, ವಿರಾಟ್ ಕೊಹ್ಲಿ ಕೂಡ ನಾಯಕತ್ವ ಕೇಳಿದ್ದರು ಎನ್ನುವ ಸುದ್ದಿ ಕೂಡ ಇದೆ.
ಜಸ್ಪ್ರೀತ್ ಬುಮ್ರಾ ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆಯಾದರೂ ಅವರ ಫಿಟ್‌ನೆಸ್ ಸಮಸ್ಯೆಯೇ ಅವರನ್ನು ನಾಯಕತ್ವದ ಆಯ್ಕೆಯಿಂದ ದೂರ ಇಟ್ಟಿದೆ. ಅವರು ಸತತವಾಗಿ ಟೆಸ್ಟ್ ಪಂದ್ಯಗಳನ್ನು ಆಡುವುದು ಗಾಯದ ಸಮಸ್ಯೆಗೆ ಕಾರಣವಾಗುವ ಕಾರಣ, ಅವರನ್ನು ನಾಯಕರನ್ನಾಗಿ ಮಾಡಲು ಬಿಸಿಸಿಐ ಹಿಂದೇಟು ಹಾಕಿದೆ.
ರಿಷಬ್ ಪಂತ್ ಉತ್ತಮ ಫಾರ್ಮ್‌ನಲ್ಲಿಲ್ಲದ ಕಾರಣ ಅವರನ್ನು ಪರಿಗಣಿಸುವ ಸಾಧ್ಯತೆ ಕೂಡ ಇಲ್ಲ. ಶುಭಮನ್ ಗಿಲ್ ಅವರ ಹೆಸರು ಸದ್ಯ ಮುಂಚೂಣಿಯಲ್ಲಿದ್ದು ಅವರೇ ಮುಂದಿನ ನಾಯಕ ಎನ್ನುವಂತೆ ಬಿಂಬಿಸಲಾಗುತ್ತಿದೆ. ಶುಭಮನ್ ಗಿಲ್ ಈಗಾಗಲೇ ಭಾರತ ಏಕದಿನ ಮತ್ತು ಟಿ20 ತಂಡಕ್ಕೆ ಉಪನಾಯಕರಾಗಿದ್ದಾರೆ, ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ಅವರನ್ನೇ ನಾಯಕತ್ವಕ್ಕೆ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications