ಕನ್ನಡತಿ ಶ್ರೇಯಾಂಕಾ ಪಾಟೀಲ್, ಇಶಾನ್ ಕಿಶನ್, ಮೊಹಮ್ಮದ್ ಶಮಿ ಸೇರಿ ಹಲವರಿಗೆ ಯಾವುದೇ ಗ್ರೇಡ್ ನೀಡದ ಬಿಸಿಸಿಐ
BCCI: ಬಿಸಿಸಿಐ ಕೆಂದ್ರ ಒಪ್ಪಂದದ ಪಟ್ಟಿಯಿಂದ ಮಹಿಳಾ ಕ್ರಿಕೆಟ್‌ನ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸೇರಿ ಹಲವರನ್ನು ಹೊರಗಿಟ್ಟಿತ್ತು. ಇದರ ಬೆನ್ನಲ್ಲೇ ಸ್ಟಾರ್ ಆಟಗಾರರಾದ ಇಶಾನ್ ಕಿಶನ್, ಮಹಮದ್ ಶಮಿ ಸೇರಿದಂತೆ ಹಲವರನ್ನು ಎಲ್ಲಾ ಗ್ರೇಡ್‌ನಿಂದ ಕೈಬಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೇಂದ್ರ ಒಪ್ಪಂದ ವ್ಯವಸ್ಥೆಯಲ್ಲಿ ಮಹತ್ವದ ಪರಿಷ್ಕರಣೆ ನಡೆಸಿದ್ದು, ಆಟಗಾರರ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಹೊಸ ವೇತನ ರಚನೆಯೊಂದಿಗೆ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿರುವ ಬಿಸಿಸಿಐ, ಈ ಬಾರಿ ಕೆಲವು ಆಟಗಾರರಿಗೆ ಹಿಂಬಡ್ತಿ ನೀಡಿದರೆ, ಕೆಲವರನ್ನು ಸಂಪೂರ್ಣವಾಗಿ ಒಪ್ಪಂದದಿಂದ ಕೈಬಿಟ್ಟಿದೆ.

ಹೊಸ ವ್ಯವಸ್ಥೆಯಲ್ಲಿ ಈ ಹಿಂದೆ ಇದ್ದ ಗ್ರೇಡ್ ಎ ವರ್ಗವನ್ನು ತೆಗೆದುಹಾಕಲಾಗಿದ್ದು, ಆಟಗಾರರನ್ನು ಅವರ ಪ್ರಸ್ತುತ ಫಾರ್ಮ್, ಲಭ್ಯತೆ ಹಾಗೂ ರಾಷ್ಟ್ರೀಯ ತಂಡದಲ್ಲಿನ ಪಾತ್ರವನ್ನು ಆಧರಿಸಿ ವಿವಿಧ ವರ್ಗಗಳಲ್ಲಿ ವಿಂಗಡಣೆ ಮಾಡಲಾಗಿದೆ. ಈ ಹಿಂದೆ ಎ ಪ್ಲಸ್ ವರ್ಗದಲ್ಲಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಬಿ ವರ್ಗಕ್ಕೆ ಸೇರಿಸಲಾಗಿದೆ. ಇಬ್ಬರೂ ಸದ್ಯ ಏಕದಿನ ಕ್ರಿಕೆಟ್‌ಗೆ ಮಾತ್ರ ಲಭ್ಯವಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಇವರಿಬ್ಬರ ವಾರ್ಷಿಕ ವೇತನದಲ್ಲಿ ಸುಮಾರು 4 ಕೋಟಿ ರೂಪಾಯಿ ಇಳಿಕೆಯಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮತ್ತೊಂದೆಡೆ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಅವರನ್ನು ಎ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ. ಈ ನಾಲ್ವರು ಆಟಗಾರರು ತಲಾ ಸುಮಾರು 2 ಕೋಟಿ ರೂಪಾಯಿ ಕಡಿಮೆ ವೇತನ ಪಡೆಯಲಿದ್ದಾರೆ ಎನ್ನಲಾಗಿದೆ.
ಒಪ್ಪಂದದಿಂದ ಹೊರಗುಳಿದ ಆಟಗಾರರು: ಪರಿಷ್ಕೃತ ಪಟ್ಟಿಯಲ್ಲಿ ಇಶಾನ್ ಕಿಶನ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಕಳೆದ ಆವೃತ್ತಿಯಲ್ಲಿ ಅವರು ನಿರಂತರವಾಗಿ ರಾಷ್ಟ್ರೀಯ ತಂಡದ ಭಾಗ ಆಗಿರದಿರುವುದು ಈ ನಿರ್ಧಾರಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಜೊತೆಗೆ ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್, ರಜತ್ ಪಾಟಿದಾರ್ ಹಾಗೂ ಮುಖೇಶ್ ಕುಮಾರ್ ಅವರಿಗೂ ಈ ಬಾರಿ ಕೇಂದ್ರ ಒಪ್ಪಂದದಲ್ಲಿ ಸ್ಥಾನ ದೊರೆತಿಲ್ಲ.
ಆಟಗಾರ್ತಿಯರ ಸಂಖ್ಯೆ ಹೆಚ್ಚಳ: ಇನ್ನೂ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಈ ಬಾರಿ ಆಟಗಾರ್ತಿಯರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕಳೆದ ಬಾರಿ 16 ಮಹಿಳಾ ಆಟಗಾರ್ತಿಯರಿಗೆ ಮಾತ್ರ ಒಪ್ಪಂದ ಇದ್ದರೆ, ಈಗ 21 ಮಂದಿಗೆ ಅವಕಾಶ ನೀಡಲಾಗಿದೆ.
ಹೊರಗುಳಿದ ಮಹಿಳಾ ಆಟಗಾರ್ತಿಯರು: ಪೂಜಾ ವಸ್ತ್ರಕರ್, ಕನ್ನಡತಿ ಶ್ರೇಯಾಂಕಾ ಪಾಟೀಲ್ ಹಾಗೂ ಟೈಟಾಸ್ ಸಾಧು ಅವರಿಗೆ ಈ ಬಾರಿ ಒಪ್ಪಂದಿಂದ ಕೈಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಶ್ರೇಯಾಂಕಾ ಪಾಟೀಲ್ ರಾಷ್ಟ್ರೀಯ ತಂಡದ ಪಂದ್ಯಗಳಲ್ಲಿ ಕಾಣಿಸಿಕೊಳ್ಳದಿರುವ ಕಾರಣ ಅವರನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಒಟ್ಟಿನಲ್ಲಿ ಬಿಸಿಸಿಐ ಹೊಸ ಕೇಂದ್ರ ಒಪ್ಪಂದ ನೀತಿಯು ಆಟಗಾರರ ಪ್ರದರ್ಶನ ಹಾಗೂ ನಿರಂತರತೆಯ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಈ ಪರಿಷ್ಕರಣೆಗಳು ಒತ್ತಿಹೇಳುತ್ತಿವೆ.












Click it and Unblock the Notifications