Champions Trophy Eng vs Aus: ಇಂಗ್ಲೆಂಡ್ ವಿರುದ್ಧ ಗೆದ್ದು ವಿಶ್ವದಾಖಲೆ ಬರೆದ ಆಸ್ಟ್ರೇಲಿಯಾ!
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಹೊಸ ವಿಶ್ವದಾಖಲೆ ಬರೆದಿದೆ. ಶನಿವಾರ ಪಾಕಿಸ್ತಾನ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 352 ರನ್‌ಗಳನ್ನು ಬೆನ್ನಟ್ಟುವ ಮೂಲಕ ಐಸಿಸಿ ಪಂದ್ಯಾವಳಿಯ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 351 ರನ್ ಕಲೆಹಾಕುವ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿತು. ಬಳಿಕ ಈ ಬೃಹತ್ ಮೊತ್ತವನ್ನು ಚೇಸ್ ಮಾಡುವ ಮೂಲಕ ಆಸ್ಟ್ರೇಲಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅತಿ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದ ತಂಡ ಎನ್ನವ ದಾಖಲೆ ಮಾಡಿತು.

2017ರಲ್ಲಿ ಇಂಗ್ಲೆಂಡ್ ಬಾಂಗ್ಲಾದೇಶದ ವಿರುದ್ಧ 308 ರನ್ ಚೇಸ್ ಮಾಡಿ ಗೆಲುವು ಸಾಧಿಸಿದ್ದು ಈವರೆಗಿನ ದಾಖಲೆಯಾಗಿತ್ತು, ಆದರೆ ಆಸ್ಟ್ರೇಲಿಯಾ ಇದೀಗ ಇಂಗ್ಲೆಂಡ್ ವಿರುದ್ಧವೇ ದೊಡ್ಡ ಮೊತ್ತವನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ.
ಬೆನ್ ಡಕೆಟ್ ಶತಕ ವ್ಯರ್ಥ
ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿದರು ಬಳಿಕ ಚೇತರಿಸಿಕೊಂಡು ಬೃಹತ್ ಮೊತ್ತ ಕಲೆಹಾಕಿತು. ಬೆನ್ ಡಕೆಟ್ 143 ಎಸೆತಗಳಲ್ಲಿ 17 ಬೌಂಡರಿ 3 ಸಿಕ್ಸರ್ ಸಹಿತ 165 ರನ್ ಗಳಿಸಿದರು. ಜೋ ರೂಟ್ 68 ರನ್ ಗಳಿಸಿದರೆ, ಜೋಸ್ ಬಟ್ಲರ್ 23 ರನ್ ಗಳಿಸಿದರು. ಜೋಫ್ರಾ ಆರ್ಚರ್ 10 ಎಸೆತಗಳಲ್ಲಿ 21 ರನ್ ಗಳಿಸುವ ಮೂಲಕ ಇಂಗ್ಲೆಂಡ್ 350 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು. ದ್ವಾರ್ಶ್ಯುಸ್ 3 ವಿಕೆಟ್ ಪಡೆದರೆ, ಆಡಂ ಝಂಪಾ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ತಲಾ 2 ವಿಕೆಟ್ ಪಡೆದರು. ಗ್ಲೆನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು.
352 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಟ್ರಾವಿಸ್ ಹೆಡ್ 6 ರನ್ ಗಳಿಸಿ ಔಟಾದರೆ, ಸ್ಟೀವ್ ಸ್ಮಿತ್ 5 ರನ್ ಗಳಿಸಿ ಔಟಾದರು. ಮ್ಯಾಥ್ಯೂ ಶಾರ್ಟ್ 66 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ಆಸರೆಯಾದರು. ಶಾರ್ಟ್ ಮತ್ತು ಲ್ಯಾಬುಸ್ಚಾಗ್ನೆ ಮೂರನೇ ವಿಕೆಟ್‌ಗೆ 95 ರನ್ ಕಲೆಹಾಕಿದರು. ಲ್ಯಾಬುಸ್ಚಾಗ್ನೆ 47 ರನ್ ಗಳಿಸಿ ಔಟಾದರು.
ಬಳಿಕ ಕ್ರೀಸ್‌ಗೆ ಬಂದ ಜೋಸ್ ಇಂಗ್ಲಿಸ್ ಕೊನೆಯವರೆಗೂ ನಿಂತು ಆಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 86 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 120 ರನ್ ಗಳಿಸಿದರು. ಅಲೆಕ್ಸ್ ಹ್ಯಾರಿ 63 ಎಸೆತಗಳಲ್ಲಿ 69 ರನ್ ಗಳಿಸಿದರೆ, ಕೊನೆಯಲ್ಲಿ ಅಬ್ಬರಿಸಿ ಗ್ಲೆನ್ ಮ್ಯಾಕ್ಸ್‌ವೆಲ್ 15 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 32 ರನ್ ಗಳಿಸಿದರು.
ಈ ಸೋಲಿನ ಮೂಲಕ ಇಂಗ್ಲೆಂಡ್ ಮತ್ತಷ್ಟು ಒತ್ತಡಕ್ಕೆ ಸಿಲುಕಿದೆ. ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ಮಾತ್ರ ಇಂಗ್ಲೆಂಡ್‌ಗೆ ಸೆಮಿಫೈನಲ್‌ಗೆ ತಲುಪಲು ಅವಕಾಶ ಸಿಗಲಿದೆ.












Click it and Unblock the Notifications