Ind vs Aus: ಮೊದಲ ದಿನ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಚೊಚ್ಚಲ ಪಂದ್ಯ ಆಡಲು ಕಣಕ್ಕಿಳಿದ ಸ್ಯಾಮ್ ಕೋನ್‌ಸ್ಟಾಸ್ 65 ಎಸೆತಗಳಲ್ಲಿ 60 ರನ್ ಗಳಿಸಿ ಅಬ್ಬರಿಸಿದರು.
ಜಸ್ಪ್ರೀತ್ ಬುಮ್ರಾರಂತಹ ಮಾರಕ ವೇಗಿಯನ್ನು ಕೂಡ ವಿಶ್ವಾಸದಿಂದಲೇ ಎದುರಿಸಿದ ಅವರು ಭಾರತ ತಂಡದ ನಿದ್ದೆಗೆಡಿಸಿದರು. ಸ್ಯಾಮ್ ಕೋನ್‌ಸ್ಟಾಸ್ ಮತ್ತು ಉಸ್ಮಾನ್ ಖವಾಜ ಮೊದಲನೇ ವಿಕೆಟ್‌ಗೆ 89 ರನ್ ಕಲೆಹಾಕಿದರು. ಖವಾಜ 57 ರನ್ ಗಳಿಸಿ ಔಟಾದರು.

ಮಾರ್ನಸ್ ಲ್ಯಾಬುಸ್ಚಾಗ್ನೆ 145 ಎಸೆತಗಳಲ್ಲಿ 72 ರನ್ ಗಳಿಸುವ ಭಾರತದ ಬೌಲರ್ ಗಳ ತಾಳ್ಮೆ ಪರೀಕ್ಷೆ ಮಾಡಿದರು. ಕಳೆದ ಎರಡು ಪಂದ್ಯಗಳಲ್ಲಿ ಭಾರತವನ್ನು ಕಾಡಿದ್ದ ಟ್ರಾವಿಸ್ ಹೆಡ್ ಈ ಬಾರಿ ಖಾತೆ ತೆರೆಯುವ ಮುನ್ನವೇ ಔಟಾದರು. ಮಿಚೆಲ್ ಮಾರ್ಷ್ 4 ರನ್ ಗಳಿಸಿ ಔಟಾದರೆ, ಅಲೆಕ್ಸ್ ಕೇರಿ 31 ರನ್ ಗಳಿಸಿದರು.
ಸ್ಟೀವನ್ ಸ್ಮಿತ್ ಅಜೇಯ 72 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ನಾಯಕ ಪಾಟ್ ಕಮ್ಮಿನ್ಸ್ ಅಜೇಯ 8 ರನ್ ಗಳಿಸಿದ್ದು ಎರಡನೇ ದಿನ ಸ್ಮಿತ್ ಜೊತೆ ಬ್ಯಾಟಿಂಗ್ ಆರಂಭಿಸಲಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ನೋಡಲು ಬರೋಬ್ಬರಿ 80 ಸಾವಿರ ಪ್ರೇಕ್ಷಕರು ನೆರೆದಿದ್ದರು. ತುಂಬಿದ್ದ ಕ್ರೀಡಾಂಗಣದಲ್ಲಿ ಮೊದಲ ದಿನ ಆಸ್ಟ್ರೇಲಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ಕೊಹ್ಲಿ ಮತ್ತು ಕೋನ್‌ಸ್ಟಾಸ್ ಜಗಳ
ಪಂದ್ಯದ ಮೊದಲ ಸೆಷನ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಕೋನ್‌ಸ್ಟಾಸ್ ನಡುವೆ ಜಗಳ ನಡೆಯಿತು. ಕೊಹ್ಲಿ ಮತ್ತು ಕೋನ್‌ಸ್ಟಾಸ್ ಆಕಸ್ಮಿಕವಾಗಿ ಡಿಕ್ಕಿ ಹೊಡೆದ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ತಕ್ಷಣವೇ ಅಂಪೈರ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಕೋನ್‌ಸ್ಟಾಸ್ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಕೋನ್‌ಸ್ಟಾಸ್ ಆಟವನ್ನು ಮೆಚ್ಚಿಕೊಂಡಿದ್ದಾರೆ.
ಬುಮ್ರಾ ಒಬ್ಬರೇ ಭರವಸೆ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಬುಮ್ರಾ ಮಾತ್ರ ಭಾರತಕ್ಕೆ ಭರವಸೆಯಾಗಿದ್ದಾರೆ, ನಾಲ್ಕನೇ ಟೆಸ್ಟ್‌ನಲ್ಲೂ ಬುಮ್ರಾ ಭಾರತಕ್ಕೆ ಆಸರೆಯಾದರು. ಮೊದಲ ದಿನ ಪ್ರಮುಖ ಮೂರು ವಿಕೆಟ್ ಪಡೆದರು. ಟ್ರಾವಿಸ್ ಹೆಡ್‌ರನ್ನು ರನ್ ಗಳಿಸುವ ಮೊದಲೇ ಔಟ್ ಮಾಡಿ ಭಾರತದ ತಲೆ ನೋವು ತಪ್ಪಿಸಿದರು. ಉಳಿದಂತೆ ಆಕಾಶ್ ದೀಪ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.












Click it and Unblock the Notifications