ಶ್ರೀಲಂಕಾ ವಿರುದ್ಧ ಸೋಲು: ಭಾರತಕ್ಕೆಷ್ಟಿದೆ ಚಾನ್ಸ್?
ದುಬೈ, ಸೆ. 7: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ನಿನ್ನೆ ಮಂಗಳವಾರ ನಡೆದ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತ ಸತತ ಎರಡನೇ ಸೋಲನುಭವಿಸಿತು. ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಟೀಮ್ ಇಂಡಿಯಾ ಮಂಗಳವಾರ ಶ್ರೀಲಂಕಾ ಎದುರೂ ಮಂಡಿಯೂರಿತು. ಇದರೊಂದಿಗೆ ಶ್ರೀಲಂಕಾ ಏಷ್ಯಾ ಕಪ್ ಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು.
ದುಬೈನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 6 ವಿಕೆಟ್‌ಗಳಿಂದ ಮಣಿಸಿತು. ಗೆಲ್ಲಲು ಭಾರತ ಒಡ್ಡಿದ 174 ರನ್ ಗುರಿಯನ್ನು ಲಂಕಾ ಒಂದು ಎಸೆತ ಇರುವಂತೆ ಬೆನ್ನಟ್ಟಿತು.
ಕ್ಯಾಪ್ಟನ್ ದಾಸುನ್ ಶಾನಕ ಮತ್ತು ಭಾನುಕ ರಾಜಪಕ್ಸ 5ನೇ ವಿಕೆಟ್‌ಗೆ 64 ರನ್‌ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾಗಿ ಲಂಕಾ ಗೆಲುವನ್ನು ಖಚಿತಪಡಿಸಿದರು. ಒಂದು ಹಂತದಲ್ಲಿ ಭಾರತ ಒಡ್ಡಿದ ಸಾಧಾರಣ ಗುರಿಯನ್ನು ಶ್ರೀಲಂಕಾ ಸುಲಭವಾಗಿ ಚೇಸ್ ಮಾಡುವ ನಿರೀಕ್ಷೆ ಇತ್ತು. ಪತುಮ್ ನಿಸಾಂಕ ಮತ್ತು ಕುಸಾಲ್ ಮೆಂಡಿಸ್ ಮೊದಲ ವಿಕೆಟ್‌ಗೆ ಕೇವಲ 11 ಓವರ್‌ನಲ್ಲಿ 97 ರನ್ ಸೇರಿಸಿ ಶ್ರೀಲಂಕಾ ಸರಾಗವಾಗಿ ಮುನ್ನುಗ್ಗುತ್ತಿತ್ತು.

ಆಗ ಯುಜವೇಂದ್ರ ಚಹಲ್ ಟ್ರಿಪಲ್ ಸ್ಟ್ರೈಕ್ ಪರಿಣಾಮವಾಗಿ ಶ್ರೀಲಂಕಾ ಕೇವಲ 13 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. ಈ ವೇಳೆ ಭಾರತಕ್ಕೆ ಗೆಲುವಿನ ಕನಸು ಚಿಗುರತೊಡಗಿತು. ಆದರೆ, ಭಾನುಕ ರಾಜಪಕ್ಸ ಮತ್ತು ದಾಸುನ್ ಶನಕ ಇಬ್ಬರೂ ಭಾರತದ ಗೆಲುವಿನ ಕನಸಿಗೆ ತಣ್ಣೀರೆರಚಿದರು.
ಇದಕ್ಕೆ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ರೋಹಿತ್ ಶರ್ಮಾ ಒಬ್ಬರೇ ಸಮರ್ಥವಾಗಿ ಆಡಿದ್ದು. ನಾಯಕ ಶರ್ಮಾ 41 ಬಾಲ್‌ನಲ್ಲಿ 72 ರನ್ ಭಾರಿಸಿದರು. ಅವರನ್ನು ಬಿಟ್ಟರೆ ಸೂರ್ಯಕುಮಾರ್ ಯಾದವ್ ಮಾತ್ರವೇ 20 ರನ್ ಗಡಿ ದಾಟಿ ಸ್ಕೋರ್ ಮಾಡಿದ್ದು. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಎರಡಂಕಿ ಸ್ಕೋರ್ ಕೂಡ್ ಗಳಿಸಲಿಲ್ಲ. ಕೊಹ್ಲಿ ಡಕ್ ಔಟ್ ಆದರು. ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಇಬ್ಬರೂ ಸಿಡಿಯಲಿಲ್ಲ. ಪರಿಣಾಮವಾಗಿ ಭಾರತಕ್ಕೆ ನಿರೀಕ್ಷಿತ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ.

ಶ್ರೀಲಂಕಾ ಫೈನಲ್‌ಗೆ?
ಏಷ್ಯಾ ಕಪ್ ಟೂರ್ನಿ ಈಗ ಸೂಪರ್ 4 ಹಂತದಲ್ಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ಮಧ್ಯೆ ಫೈನಲ್ ಪ್ರವೇಶಕ್ಕಾಗಿ ಹಣಾಹಣಿ ನಡೆದಿದೆ. ಶ್ರೀಲಂಕಾ ಇದೀಗ ಅಫ್ಘಾನಿಸ್ತಾನ ಮತ್ತು ಭಾರತ ವಿರುದ್ಧ ಗೆದ್ದು ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ಧ ಬುಧವಾರ ಒಂದು ಪಂದ್ಯ ಬಾಕಿ ಇದೆಯಾದರೂ ಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ. ಶ್ರೀಲಂಕಾ ಫೈನಲ್ ತಲುಪುವುದು ತಪ್ಪಬೇಕಾದರೆ ಪವಾಡವೇ ಆಗಬೇಕು.
ಭಾರತಕ್ಕೆ ಎಷ್ಟಿದೆ ಅವಕಾಶ?
ಭಾರತ ಸತತ ಎರಡು ಪಂದ್ಯ ಸೋತು ಬಹುತೇಕ ನಿರ್ಗಮನದ ಸ್ಥಿತಿಯಲ್ಲಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತಿರುವ ಭಾರತಕ್ಕೆ ಇದೀಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಮಾತ್ರ ಬಾಕಿ ಇರುವುದು. ಟ್ರಿಪಲ್ ಲಕ್ ಒದಗಿ ಬಂದರೆ ಮಾತ್ರ ಭಾರತಕ್ಕೆ ಫೈನಲ್ ತಲುಪುವ ಅವಕಾಶ.
ಲಕ್ 1: ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲಬೇಕು,
ಲಕ್ 2: ಅಫ್ಘಾನಿಸ್ತಾನ ವಿರುದ್ಧ ಭಾರತ ಗೆಲ್ಲಬೇಕು
ಲಕ್ 3: ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಕಡಿಮೆ ಅಂತರದಿಂದ ಸೋಲಬೇಕು.
ಈ ಮೂರು ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಅದೃಷ್ಟ ಎಂದರೆ ಈ ಮೂರೂ ಸಾಧ್ಯತೆಗಳಲ್ಲಿ ಒಂದು ತಪ್ಪಿದರೂ ಭಾರತಕ್ಕೆ ಫೈನಲ್ ಅವಕಾಶ ತಪ್ಪಿದಂತೆಯೇ.
ದುಬೈ ಶಾಪ:
ದುಬೈ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕಳೆದ ಎರಡು ವರ್ಷದಿಂದ ಕುತೂಹಲಕಾರಿ ಟ್ರೆಂಡ್ ಇದೆ. ಇಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳೇ ಬಹುತೇಕ ಗೆಲ್ಲುತ್ತಿವೆ. ಹಾಂಕಾಂಗ್ ಮತ್ತು ಸ್ಕಾಟ್ಲೆಂಡ್ ತಂಡಗಳ ಮಾತ್ರ ಇದಕ್ಕೆ ಅಪವಾದ.
ಇನ್ನೊಂದೆಡೆ, ಭಾರತದ ರೋಹಿತ್ ಶರ್ಮಾ ನಿನ್ನೆಯ ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿದರೂ ಭಾರತ ಸೋತಿತು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 32 ಬಾರಿ ಅರ್ಧಶತಕ ಗಳಿಸಿದ್ದಾರೆ. ಆಗೆಲ್ಲಾ ಭಾರತ ಸೋತಿದ್ದು ಅಪರೂಪ. ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿಯೂ ಭಾರತ ಸೋತಿದ್ದು ಕೇವಲ ನಾಲ್ಕು ಬಾರಿ ಮಾತ್ರ. ದುರದೃಷ್ಟಕ್ಕೆ ನಿನ್ನೆ ಮಂಗಳವಾರ ಅಂಥದ್ದೊಂದು ದಿನವಾಗಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications