Anil Kumble On Rohit Sharma: ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಕ್ರಮಾಂಕದ ಸಲಹೆ ನೀಡಿದ ಅನಿಲ್ ಕುಂಬ್ಳೆ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ, ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟರ್ ಮತ್ತು ಯಶಸ್ವಿ ನಾಯಕರುಗಳಲ್ಲಿ ರೋಹಿತ್ ಶರ್ಮಾ ಒಬ್ಬರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಟಿ20 ಲೀಗ್ ಇತಿಹಾಸದಲ್ಲಿ ಯಶಸ್ವಿಯಾಗಿ ಮುನ್ನಡೆಸಿ ಐದು ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದು, ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು 16 ಸೀಸನ್ ಆಡಲು ಉತ್ಸುಕರಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.
ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರು. ಅಲ್ಲದೇ ತಮ್ಮ ನಾಯಕತ್ವದ ತಂಡ ಕೊನೆಯ ಸ್ಥಾನ ಪಡೆದು ಹೀನಾಯವಾಗಿ ಹೊಎಬಂದಿತು. ಇದೀಗ 2023ರ ಐಪಿಎಲ್ ಋತುವಿಗೆ ಬಲಾಡ್ಯ ತಂಡವನ್ನು ರೂಪಿಸಿಕೊಂಡಿದ್ದು, ಮತ್ತೊಂದು ಪ್ರಶಸ್ತಿಗಾಗಿ ಹೋರಾಡಲಿದೆ.
ಇದೇ ವೇಳೆ, ಭಾರತ ತಂಡದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಇನ್ನಿಂಗ್ಸ್ ತೆರೆಯದಂತೆ ಒತ್ತಾಯಿಸಿದ್ದಾರೆ. ಬದಲಾಗಿ ಮಧ್ಯಮ ಕ್ರಮಾಂಕದ 4ನೇ ಸ್ಥಾನದಲ್ಲಿ ಕ್ರೀಸ್‌ಗೆ ಇಳಿಯುವಂತೆ ಸಲಹೆ ನೀಡಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದು, ಪ್ಲೇಆಫ್ ಪ್ರವೇಶಿಸಲು ಅವರ ಬ್ಯಾಟಿಂಗ್ ಪ್ರದರ್ಶನ ಪ್ರಮುಖವಾಗಿದೆ.

ಅನಿಲ್ ಕುಂಬ್ಳೆ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡ ಕೆಲವು ಉತ್ತಮ ಬ್ಯಾಟರ್‌ಗಳನ್ನು ಹೊಂದಿದ್ದು, ಅವರು ಅಗ್ರ ಕ್ರಮಾಂಕದಲ್ಲಿ ಸ್ಫೋಟಕ ಆರಂಭ ನೀಡಲಿದ್ದಾರೆ. ಇಶಾನ್ ಕಿಶನ್ ಮತ್ತು ಕ್ಯಾಮೆರಾನ್ ಗ್ರೀನ್ ಅವರಂತ ಆಟಗಾರರು ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಬೇಕು. ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಲು ನಿರ್ಧರಿಸಿದರೆ ಡೆವಾಲ್ಡ್ ಬ್ರೆವಿಸ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ತಮ್ಮ ಪಾತ್ರವನ್ನು ನಿರ್ವಹಿಸಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
"ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿದ್ದಾರೆ. ಏನು ಹೇಳಬೇಕೋ ಅದನ್ನು ಹೇಳಲು ಹಿಂಜರಿಯುವುದಿಲ್ಲ. ಆತನಿಗೆ ಸಾಕಷ್ಟು ಅನುಭವವಿದೆ ಮತ್ತು ಸಹ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಾನೆ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ತಂಡದ ನಾಯಕನಿಂದ ನಾವು ಬಯಸುವುದು ಅದನ್ನೇ," ಎಂದು ಅನಿಲ್ ಕುಂಬ್ಳೆ ಅವರು JioCinema ದಲ್ಲಿ ಮಾತನಾಡಿದರು.
"2017ರಲ್ಲಿ ಹೊಸ ತಂಡದಿಂದ ಕೂಡಿತ್ತು ಮತ್ತು ಕಡಿಮೆ ಸ್ಕೋರ್‌ಗಳನ್ನು ಡಿಫೆಂಡ್ ಮಾಡುವ ವಿಷಯದಲ್ಲಿ ನಾವು ರೋಹಿತ್ ಶರ್ಮಾರಿಂದ ಅತ್ಯುತ್ತಮ ನಾಯಕತ್ವ ಕೌಶಲ್ಯವನ್ನು ನೋಡಿದ್ದೇವೆ," ಎಂದು ಅನಿಲ್ ಕುಂಬ್ಳೆ ತಿಳಿಸಿದರು.

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವಿಭಾಗ ಒತ್ತಡವನ್ನು ಉತ್ತಮವಾಗಿ ನಿಭಾಯಿಸಲು ನಾಯಕ ರೋಹಿತ್ ಶರ್ಮಾ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬೇಕು ಎಂದು ಅನಿಲ್ ಕುಂಬ್ಳೆ ಸಲಹೆ ನೀಡಿದರು.
"ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರನ ಅವಶ್ಯಕತೆ ಇದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೆಲವು ಅದ್ಭುತ ಬ್ಯಾಟರ್‌ಗಳಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಅವರಂತಹ ಬ್ಯಾಟರ್ 7ರಿಂದ 15 ಓವರ್‌ಗಳಲ್ಲಿ ಒತ್ತಡ ನಿಭಾಯಿಸಲು ಅತ್ಯಂತ ಪ್ರಮುಕ ಬ್ಯಾಟ್ಸ್‌ಮನ್ ಎಂದು ನಾನು ಭಾವಿಸುತ್ತೇನೆ," ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದರು.












Click it and Unblock the Notifications